ನೋಡೋಕೆ ಫುಲ್ ಸಾಫ್ಟ್, ಸಕತ್ ಫ್ರೆಂಡ್ಲಿ, ಆದ್ರೆ ಡ್ಯೂಟಿ ವಿಚಾರದಲ್ಲಿ ಮಾತ್ರ ರಫ್ ಅಂಡ್ ಟಫ್. ಅಖಾಡಕ್ಕೆ ಇಳಿದ್ರೆ ಪ್ರಕರಣವನ್ನ ಭೇದಿಸದೆ ಇರೋದಿಲ್ಲ. ಆತನ ಚಾಣಾಕ್ಷತನಕ್ಕೆ ರಾಜ್ಯಕ್ಕೆ ಪ್ರಥಮ ಎನಿಸಿಕೊಂಡು ಗೋಲ್ಡ್ ಮೆಡಲ್ ಪಡೆದ್ರೆ, ಆಲ್ ಇಂಡಿಯಾ ರೇಂಜ್ ನಲ್ಲಿ ಪದಕಗಳಿಸಿ ಮೈಸೂರಿಗಷ್ಟೆ ಅಲ್ಲದೆ ರಾಜ್ಯಕ್ಕೆ ಹೆಮ್ಮೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ ಅಷ್ಟಕ್ಕೂ ಯಾರೀತ ಒಂದೊಮ್ಮೇ ನೋಡಿ.
ಕುತ್ತಿಗೆಯಲ್ಲಿ ಗೋಲ್ಡ್ ಮೆಡಲ್ ವರ್ಕ್ ಮೂಡ್ ಬಂದಾಗ ಫುಲ್ ಎಪಿಷಿಯಂಟ್… ಅಂದಹಾಗೆ ನಾವು ಹೇಳ್ತಾ ಇರೋದು ಇವನ ಬಗ್ಗೆಯೇ. ಇತನೇ ಅರ್ಜುನ, ಮಾದಕ ವಸ್ತುಗಳನ್ನ ಭೇದಿಸೋ ರಣಬೇಟೆಗಾರ. ಅಂಬಾರಿ ಹೊತ್ತ ಅರ್ಜುನನ ನೆನಪು ಮಾಸುವ ಮುನ್ನವೇ ಈ ಅರ್ಜುನ ಹೆಸರಿನ ಪೊಲೀಸ್ ಶ್ವಾನ ಇದೀಗ ಮೈಸೂರು ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿದ್ದಾನೆ.
ರಾಜ್ಯದಲ್ಲಿ ನಾರ್ಕೊಟಿಕ್ಸ್ ವಿಭಾಗದಲ್ಲಿ ಮಾದಕ ವಸ್ತುಗಳನ್ನು ಭೇದಿಸುವಲ್ಲಿ ನಂ.1 ಸ್ಥಾನ ಪಡೆದಿದ್ದು, ಮೈಸೂರಿನ ಪೊಲೀಸ್ ಇಲಾಖೆ ಶ್ವಾನದಳದ ಈ ಅರ್ಜುನ, ಲಕ್ನೋದಲ್ಲಿ ನಡೆದ ಆಲ್ ಇಂಡಿಯಾ ಡ್ಯೂಟಿ ಮೀಟ್ ನಲ್ಲಿ ನಾಲ್ಕನೇ ಸ್ಥಾನ ಗೆದ್ದು ಕರುನಾಡಿಗೆ ಕೀರ್ತಿ ತಂದಿದ್ದಾನೆ ಎಂದು ಎದೆಯುಬ್ಬಿಸಿ ಹೇಳಿದವರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್.ಈ ಅರ್ಜುನಿಗೆ ಈಗಿನ್ನೂ 3 ವರ್ಷ ವಯಸ್ಸು. ಕೇವಲ 6 ತಿಂಗಳ ಮರಿ ಇದ್ದಾಗ ಪೊಲೀಸ್ ಇಲಾಖೆಯು ರಾಜ್ ಕುಮಲ್ ಕೆನಲ್ ಮೂಲಕ ಖರೀದಿ ಮಾಡಿತ್ತು.
ಕಳೆದ 3 ವರ್ಷಗಳಿಂದಲೂ ನಾರ್ಕೋಟಿಕ್ ವಿಭಾಗದಲ್ಲಿ ಸಕ್ರಿಯನಾಗಿರೋ ಈ ಅರ್ಜುನನ ಮೇಲೆ ಪೊಲೀಸ್ ಇಲಾಖೆಗೆ ಹೆಚ್ಚು ಭರವಸೆ. ನಾರ್ಕೋಟಿಕ್ಸ್ ವಿಭಾಗದಲ್ಲಿ ಕಳೆದ 3 ವರ್ಷಗಳಿಂದಲೂ ಕೆಲಸ ನಿರ್ವಹಣೆ ಮಾಡ್ತಾ ಇರೋ ಈ ಅರ್ಜುನ ಹಲವು ಕೇಸ್ ಗಳನ್ನು ಭೇದಿಸಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.