ಬೆಂಗಳೂರು: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮಹತ್ತರ ದಾಖಲೆ ನಿರ್ಮಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಭಾರತ ತಂಡದ ಪರ ಸುದೀರ್ಘ ಕಾಲದ ಕ್ರಿಕೆಟ್ ನಲ್ಲಿ 4,000 ರನ್ ಪೂರೈಸಿದ 17ನೇ ಆಟಗಾರರಾಗಿ ಗುರುತಿಸಿಕೊಂಡಿದ್ದು, ಇದೇ ವೇಳೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1000 ರನ್ ಬಾರಿಸಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಇರುವ ಎಲೈಟ್ ಗುಂಪಿಗೆ ಸೇರ್ಪಡೆಗೊಂಡಿದ್ದಾರೆ.
ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ನಿಮಿತ್ತ ರಾಂಚಿಯ ಜೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ವೇಳೆ ಹಿಟ್ ಮ್ಯಾನ್ ಈ ಎರಡು ಮಹತ್ತರ ದಾಖಲೆ ನಿರ್ಮಿಸಿದ್ದು, ರಾಂಚಿ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾದ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ (51ಕ್ಕೆ5) ಹಾಗೂ ಕುಲ್ದೀಪ್ ಯಾದವ್ (22ಕ್ಕೆ4) ಜಾಲಕ್ಕೆ ಸಿಲುಕಿದ ಇಂಗ್ಲೆಂಡ್ ನ ಘಟಾನುಘಟಿ ಬ್ಯಾಟರ್ ಗಳು 145 ರನ್ ಗಳಿಗೆ ಆಲ್ ಔಟ್ ಆಗಿ ಪಂದ್ಯ ಗೆಲ್ಲಲು ಅತಿಥೇಯ ತಂಡಕ್ಕೆ 192 ರನ್ ಗಳ ಸುಲಭ ಗುರಿ ನೀಡಿದೆ.
ಈ ಸವಾಲಿನ ಮೊತ್ತ ಹಿಂಬಾಲಿಸಿರುವ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ 3ನೇ ದಿನದಾಟದ ಅಂತ್ಯಕ್ಕೆ ಅಜೇಯ 24 ರನ್ ಗಳಿಸಿದ್ದು, ಧರ್ಮಶಾಲಾದಲ್ಲಿ ನಡೆಯುವ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನವೇ 5 ಪಂದ್ಯಗಳ ಸರಣಿಯನ್ನು 3-1 ರಿಂದ ವಶಪಡಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.