ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ಸದನದಲ್ಲಿ ಮಂಡಿಸಲಿರುವ ಬಜೆಟ್ ಬಗ್ಗೆ ಜನರಲ್ಲಾಗಲೀ, ಬಿಜೆಪಿಗಾಗಲೀ ಯಾವುದೇ ನಿರೀಕ್ಷೆ ಇಲ್ಲ, ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಜನರ ಕಿವಿಗೆ ಹೂಮುಡಿಸುವ ಕೆಲಸ ಅವರಿಂದಾಗಲಿದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ತಿಳಿಸಿದರು.
ಬಜೆಟ್ ಮುನ್ನಾದಿನವಾಗಿರುವ ಇಂದು ಅಧಿವೇಶನಲ್ಲಿ ಭಾಗವಹಿಸಲು ವಿಧಾನಸೌಧಕ್ಕೆ ಆಗಮಿಸಿದ ವಿಜಯೇಂದ್ರ, ಅಧಿಕಾರಕ್ಕೆ ಬಂದು 8-9 ತಿಂಗಳು ಕಳೆದರೂ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳದ ಸಿದ್ದರಾಮಯ್ಯ ಸರ್ಕಾರ, ಖಜಾನೆ ಖಾಲಿ ಮಾಡಿದೆ ಮತ್ತು ವೈಫಲ್ಯಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ, ದೆಹಲಿಗೆ ಹೋಗಿ ನಾಟಕ ಮಾಡುವ ಸರಕಾರ ಮಂಡಿಸುವ ಬಜೆಟ್ ಬಗ್ಗೆ ಯಾವ ಆಶಾಭಾವನೆ ಇಟ್ಟುಕೊಳ್ಳುವುದು ಸಾಧ್ಯ? ಎಂದು ವಿವರಿಸಿದರು.
ವಿಧಾನಸಭಾ ಚುನಾವಣೆ ಸಮಯದಲ್ಲಿ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸರ್ಕಾರ ಈಗ ಬರಲಿರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಜೆಟ್ ನಲ್ಲಿ ಅಂಥ ಗಿಮಿಕ್ ಮಾಡುವ ಪ್ರಯತ್ನ ಮಾಡುತ್ತದೆ, ಆದರೆ ನಾಡಿನ ಜನ ಪ್ರಜ್ಞಾವಂತರು, ಅವರನ್ನು ಪದೇಪದೆ ಬೇಸ್ತು ಬೀಳಿಸುವುದು ಸಾಧ್ಯವಿಲ್ಲ ಎಂದು ಸೂಚಿಸಿದರು.