This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local NewsNational NewsPolitics NewsState News

ಸೋಮಣ್ಣ ಚಿತ್ತ ಸಿದ್ದನಕೊಳ್ಳದತ್ತ

ಸೋಮಣ್ಣ ಚಿತ್ತ ಸಿದ್ದನಕೊಳ್ಳದತ್ತ

ಬಾಗಲಕೋಟೆ

ರಾಜ್ಯ ಬಿಜೆಪಿ ಪಾಳೆಯದಲ್ಲಿ ಸದಾ ಸುದ್ದಿಯಲ್ಲಿರುವ ಮಾಜಿ ಸಚಿವ ವಿ. ಸೋಮಣ್ಣ ಅವರ ಸಿದ್ದನಕೊಳ್ಳಮಠದಲ್ಲಿನ ಸಂಕಲ್ಪ ಸಿದ್ದಿಸಿತಾ ಎನ್ನುವ ಮಾತು ರಾಜಕೀಯ ಅಂಗಳದಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಅಣತಿಯಂತೆ ಸೋಮಣ್ಣ ಅವರು ಒಲ್ಲದ ಮನಸ್ಸಿನಿಂದಲೇ ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಬಳಿಕ ಅವರು ಪಕ್ಷದ ವರಿಷ್ಠರ ವಿರುದ್ದ ಸಮರ ಸಾರಿದ್ದರು. ಪರಿಣಾಮವಾಗಿ ಸೋಮಣ್ಣ ರಾಜ್ಯ ಬಿಜೆಪಿಗರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರು.

ಪಕ್ಷದಲ್ಲಿ ತಮಗೆ ಸೂಕ್ತ ಸ್ಥಾನಮಾನ ಸಿಕ್ಕುತ್ತಿಲ್ಲ ಎಂದು ಬಹಿರಂಗವಾಗಿಯೇ ಸಿಡಿದಿದ್ದರು. ಇನ್ನೇನು ಸೋಮಣ್ಣ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಹಂತದವರೆಗೆ ಚರ್ಚೆಗಳು ನಡೆದಿದ್ದವು. ಜತೆಗೆ ಪಕ್ಷದ ವರಿಷ್ಠರು ಕೂಡಾ ಇವರ ಭೇಟಿಗೆ ಅವಕಾಶ ನೀಡಿರಲಿಲ್ಲ.

ಇಂತಹ ಸನ್ನಿವೇಶದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಸೋಮಣ್ಣ ಅವರು ಏಕಾಏಕಿ ಕಲಾವಿದರ ಮಠವೆಂದು ಖ್ಯಾತವಾಗಿರುವ ಇಳಕಲ್ ತಾಲೂಕಿನ ಸಿದ್ದನಕೊಳ್ಳ ಮಠಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಈ ವೇಳೆ ಮಠದ ಶ್ರೀಗಳೊಂದಿಗೆ ಮಾತುಕತೆ ನಡೆಸಿ, ಅವರ ಸಲಹೆಯಂತೆ ಸಂಕಲ್ಪ ಸಿದ್ದಿಗಾಗಿ ಜೋಡು ಟೆಂಗಿನಕಾಯಿ ಇಟ್ಟು ಹೋಗಿದ್ದರು.

ಮಠದ ಭೇಟಿಯ ಬಳಿಕ ಸೋಮಣ್ಣ ಅವರಿಗೆ ವರಿಷ್ಠರಿಂದ ದೆಹಲಿಗೆ ಬರುವಂತೆ ಬುಲಾವ್ ಬಂದಿತ್ತು. ಇತ್ತೀಚೆಗಷ್ಟೆ ವರಿಷ್ಠರನ್ನು ಭೇಟಿ ಮಾಡಿದ ಬಳಿಕ ಅವರ ಮಾತಿನ ದಾಟಿ ಬದಲಾಗಿತ್ತು.

ಯಾವುದೇ ಕಾರಣದಿಂದಲೂ ಪಕ್ಷ ಬಿಡುವುದಿಲ್ಲ ಎನ್ನುವ ಹೇಳಿಕೆ ಕೂಡ ನೀಡಿದ್ದರು. ಅಷ್ಟರ ಮಟ್ಟಿಗೆ ರಾಜ್ಯ ನಾಯಕರ ವಿರುದ್ಧ ಅವರ ಮುನಿಸು ಕಡಿಮೆ ಆದಂತೆ ಕಾಣಿಸುತ್ತಿದೆ.

ಏತನ್ಮಧ್ಯೆ ಅವರು ಸಿದ್ದನಕೊಳ್ಳದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ತುಮಕೂರಿನ ಸಿದ್ದಗಂಗಾ‌ಮಠ ಸೇರಿದಂತೆ ನಾಡಿನ ಬಹುತೇಕ ಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಸಿದ್ದನಕೊಳ್ಳಕ್ಕೆ ಮೇಲಿಂದ ಮೇಲೆ ಆಗಮಿಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸೋಮಣ್ಣ ಅವರ ಎರಡನೇ ಬಾರಿ‌ಯ ಮಠದ ಭೇಟಿಯ ಹಿಂದೆ ಮೊದಲ‌ ಭೇಟಿಯ ಸಂಕಲ್ಪ ಸಿದ್ದಿಯ ರಹಸ್ಯವೇನಾದರೂ ಅಡಗಿದೆಯೊ ಏನೋ ಎನ್ನುವ ಕುತೂಹಲ ಸಹಜವಾಗಿಯೇ ಹೆಚ್ಚಾಗಿದೆ.

ಇದುವರೆಗೂ ಕಲಾವಿದರ ಮಠವಾಗಿದ್ದ ಸಿದ್ದನಕೊಳ್ಳದ ಮಠ, ಇದೀಗ ರಾಜಕಾರಣಿಗಳ ಭೇಟಿಯ ತಾಣವಾಗಿದೆ. ಮಠದ ಜಾತ್ರೆಯ ಕಾರ್ಯಕ್ರಮದಲ್ಲಿ ಜಿಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರಿಗೆ ಸಂಸದರಾಗುವ ಅವಕಾಶವಿದೆ ಎಂದು ಮಠದ ಶ್ರೀಗಳು ಬಹಿರಂಗವಾಗಿ ಹೇಳಿದ್ದಾರೆ.

ಶ್ರೀಗಳ ಹೇಳಿಕೆ ಅತ್ಯಲ್ಪ ದಿನಗಳಲ್ಲೆ ಸೋಮಣ್ಣ ಅವರ ಮರು ಭೇಟಿ ಪರಿಣಾಮ ಇತ್ತೀಚಿನ ದಿನಗಳಲ್ಲಿ ಕಲಾವಿದರ ಜತೆಗೆ ರಾಜಕಾರಣಿಗಳನ್ನು ಸಿದ್ದನಕೊಳ್ಳ ಮಠ ಆಕರ್ಷಿಸುತ್ತಿದೆ.

ಸೋಮಣ್ಣ ಅವರ ಮಠದ ಎರಡೂ ಭೇಟಿಯ ಹಿಂದಿನ ರಹಸ್ಯ ಮಾತ್ರ ನಿಗೂಢವಾಗಿದೆಯಾದರೂ ಬಿಜೆಪಿ ವರಿಷ್ಠರ ಭೇಟಿಯ ವೇಳೆ ಸಿಹಿಸುದ್ದಿ ಸಿಕ್ಕಿರಬಹುದು, ಮಠದಲ್ಲಿನ ಅವರ ಸಂಕಲ್ಪ ಸಿದ್ದಿಸಿರಬಹುದು ಎನ್ನುವ‌ ಮಾತುಗಳು ವ್ಯಾಪಕವಾಗಿವೆ.

Nimma Suddi
";