This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಹೋಬಳಿ ಮಟ್ಟದಲ್ಲಿ ಟಿಸಿ ದುರಸ್ಥಿ ಕೇಂದ್ರ

ಹೋಬಳಿ ಮಟ್ಟದಲ್ಲಿ ಟಿಸಿ ದುರಸ್ತಿ ಕೇಂದ್ರಗಳ ಸ್ಥಾಪನೆಗೆ ತಕ್ಷಣ ಲೈಸೆನ್ಸ್ ನೀಡಲು ಶ್ರೀ ಗೋವಿಂದ ಕಾರಜೋಳ ಸೂಚನೆ

ನಿಮ್ಮ ಸುದ್ದಿ ಬೆಳಗಾವಿ

ಪ್ರವಾಹ ಸಂದರ್ಭದಲ್ಲಿ ಹಾಗೂ ನಂತರದ ದಿನಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ತೀವ್ರ ತೊಂದರೆ ಉಂಟಾಗುವುದರಿಂದ ತುರ್ತು ದುರಸ್ತಿಗೆ ಅನುಕೂಲವಾಗುವಂತೆ ಪ್ರತಿ ಹೋಬಳಿ ಮಟ್ಟದಲ್ಲಿ ಟಿ.ಸಿ. ದುರಸ್ತಿ ಕೇಂದ್ರಗಳನ್ನು ಆರಂಭಿಸಲು ತಕ್ಷಣವೇ ಲೈಸೆನ್ಸ್ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಗೋವಿಂದ ಕಾರಜೋಳ ಅವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂಗಾರು ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ (ಜೂ.23) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಹೋಬಳಿ ಮಟ್ಟದಲ್ಲಿ ಟಿ.ಸಿ. ದುರಸ್ತಿ ಕೇಂದ್ರಗಳನ್ನು ಆರಂಭಿಸಲು ತಕ್ಷಣವೇ ಲೈಸೆನ್ಸ್ ನೀಡಬೇಕು.
ಅಗತ್ಯ ಟಿಸಿ ಮತ್ತು ಕಂಡಕ್ಟರ್ ಗಳನ್ನು ಚಿಕ್ಕೋಡಿ ಉಪ ವಿಭಾಗಕ್ಕೆ ಪೂರೈಸಬೇಕು ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸಭೆಯಲ್ಲಿಯೇ ದೂರವಾಣಿ ಮೂಲಕ ನಿರ್ದೇಶನ ನೀಡಿದರು.

ನದಿತೀರದ ಪ್ರದೇಶಗಳನ್ನು ಹೊಂದಿರುವ ಚಿಕ್ಕೋಡಿ ಉಪ ವಿಭಾಗದಲ್ಲಿ ಖಾಲಿ ಇರುವ ಹೆಸ್ಕಾಂ ಅಧಿಕಾರಿ ಹುದ್ದೆಗಳಿಗೆ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. ಪ್ರವಾಹ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರು ಪೂರೈಕೆ, ನೀರಾವರಿ ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸಲಿವೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

33 ಕೆ.ವಿ. ಸ್ಟೇಷನ್ ಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವ ಸಲ್ಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅತಿವೃಷ್ಟಿ ಹಾಗೂ ಪ್ರವಾಹದಿಂದ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ತುರ್ತು ದುರಸ್ತಿಗೆ ಅಗತ್ಯವಿರುವ ವಿದ್ಯುತ್ ವಾಹಕಗಳು, ಪರಿವರ್ತಕಗಳು, ಕಂಬಗಳು ಮತ್ತು ವಿದ್ಯುತ್ ತಂತಿಯನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನದಿತೀರದ ಗ್ರಾಮದಲ್ಲಿ ಲಸಿಕೆಗೆ ಆದ್ಯತೆ:

ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶ್ರೀ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಇನ್ನೂ ಹೆಚ್ಚಿನ ಲಸಿಕೆ ಪೂರೈಕೆಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಮನೆಹಾನಿಯ ಕುರಿತು ಅನೇಕ ಜನರು ಅಹವಾಲು ಸಲ್ಲಿಸುತ್ತಾರೆ. ಮುಕ್ತ ಮನಸ್ಸಿನಿಂದ ಪರಿಹಾರ ಬಿಡುಗಡೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಣ್ಣು‌ ಹಾಗೂ ಮೇಲ್ ಮುದ್ದಿಗಳು ಈ ಭಾಗದಲ್ಲಿ ಪಕ್ಕಾ ಮನೆಗಳೇ ಆಗಿರುವುದರಿಂದ ಅವುಗಳನ್ನು ಪಕ್ಕಾ ಮನೆ ಎಂದೇ ಪರಿಗಣಿಸಿ ಪರಿಹಾರ ನೀಡಬೇಕು. ಭಾಗಶಃ ಮನೆಹಾನಿಗಳನ್ನು ಸಮೀಕ್ಷೆ ಮಾಡುವಾಗ ಸ್ಥಳೀಯ ಜನರ ಸ್ಥಿತಿಗತಿ ಆಧರಿಸಿ ಉದಾರ ಮನೋಭಾವದಿಂದ ಪರಿಹಾರಕ್ಕೆ ಪರಿಗಣಿಸಬೇಕು.

ಹಂತ ಹಂತವಾಗಿ ನೀರು ಬಿಡುಗಡೆ ಮಹಾರಾಷ್ಟ್ರ ಸಮ್ಮತಿ:

ಜಲಾಶಯ ಸಂಪೂರ್ಣ ಭರ್ತಿಯಾದಾಗ ಒಮ್ಮೆಲೆ ನೀರು ಬಿಡುಗಡೆ ಮಾಡಿದರೆ ತೊಂದರೆಯಾಗುತ್ತದೆ. ಆದ್ದರಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ‌ ಶ್ರೀ ಗೋವಿಂದ ಕಾರಜೋಳ ತಿಳಿಸಿದರು.

ಹಂತ ಹಂತವಾಗಿ ನೀರು‌ ಬಿಡುಗಡೆಗೆ ಮಹಾರಾಷ್ಟ್ರ ಸರಕಾರ ಕೂಡ ಸಹಮತ ವ್ಯಕ್ತಪಡಿಸಿದೆ. ಪ್ರವಾಹ ಪರಿಸ್ಥಿತಿ ಉದ್ಭವಿಸಿದರೆ ನದಿತೀರದ ಜನರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರವಾಹ ಬಂದಾಗ ಸಂಪೂರ್ಣ ಜಲಾವೃತವಾಗುವ ಗ್ರಾಮಗಳ ಜನರು ಹಾಗೂ ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಬೇಕು.

ಪ್ರವಾಹ ಸಂದರ್ಭದಲ್ಲಿ ತುರ್ತು ಸೇವೆಗೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದೀರ್ಘ ರಜೆ ನೀಡಬಾರದು. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಚಿಕಿತ್ಸೆಗೆ ಆಗಮಿಸುವ ಜನರಿಗೆ ಔಷಧಿ ಚೀಟಿ ಬರೆದುಕೊಟ್ಟರೆ ಸಂಬಂಧಿಸಿದ ಆರೋಗ್ಯಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ವರಿಕೆ ನೀಡಿದರು.

ಕೋವಿಡ್ ಪ್ರಯೋಗಾಲಯ ತಕ್ಷಣ ಆರಂಭಿಸಲು ಸೂಚನೆ:

ಚಿಕ್ಕೋಡಿಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯವು ಮೂರ್ನಾಲ್ಕು ದಿನಗಳಲ್ಲಿ ಸ್ಥಾಪಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು..

ಕೆಲವೆಡೆ ಶಾಲಾ ಕಟ್ಟಡಗಳು ಶಿಥಿಲಗೊಂಡಿರುವುದರಿಂದ ಉತ್ತಮ ಸ್ಥಿತಿಯಲ್ಲಿ ಇರುವ ಶಾಲಾ ಕಟ್ಟಡಗಳಲ್ಲಿ ಮಾತ್ರವೇ ಕಾಳಜಿ ಕೇಂದ್ರ ಆರಂಭಿಸಬೇಕು ಎಂದು ಜವಳಿ ಮತ್ತು ಕೈಮಗ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀ ಶ್ರೀಮಂತ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.

ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಕೋವಿಡ್ ನಿರೋಧಕ ಲಸಿಕೆ ನೀಡಬೇಕು ಎಂದು ಶಾಸಕ ಶ್ರೀ ಗಣೇಶ್ ಹುಕ್ಕೇರಿ ಸಚಿವರಿಗೆ ಒತ್ತಾಯಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ತಕ್ಷಣವೇ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನೆರೆಯ ರಾಜ್ಯದ ಜಲಾಶಯಗಳಿಂದ ನೀರು ಬಿಡುಗಡೆ ಮತ್ತು ಮಳೆಯ ಪ್ರಮಾಣ ಕುರಿತು ನಿಖರ ಮಾಹಿತಿ ವಿನಿಮಯಕ್ಕೆ ಅನುಕೂಲವಾಗುವಂತೆ ನಮ್ಮ ರಾಜ್ಯದ ಅಧಿಕಾರಿಗಳನ್ನು ನಿಯೋಜಿಸಲು ಕೂಡ ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕ ಮಹೇಶ್ ಕುಮಠಳ್ಳಿ ಅವರು ಸಚಿವರ ಗಮನಸೆಳೆದರು.

ಪ್ರವಾಹ ಮುನ್ನೆಚ್ಚರಿಕೆ ಅಗತ್ಯ- ಕವಟಗಿಮಠ:

ಪ್ರತಿವರ್ಷ ಪ್ರವಾಹ ಬರುವುದು ಸಹಜ ಸ್ಥಿತಿಯಾಗುತ್ತಿದೆ. ಈ ಬಾರಿ ಆರಂಭದಲ್ಲಿಯೇ ಜಾಸ್ತಿ ಮಳೆಯಾಗಿರುವುದರಿಂದ ಬಹಳಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಶ್ರೀ ಈ ಮಹಾಂತೇಶ ಕವಟಗಿಮಠ ಹೇಳಿದರು.

ನೆರೆಯ ರಾಜ್ಯದ ಅಧಿಕಾರಿಗಳ ಜತೆ ಸಮನ್ವಯದಿಂದ ಪ್ರವಾಹ ಸ್ಥಿತಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ನದಿತೀರದ ಗ್ರಾಮಗಳಲ್ಲಿ ಕೆಲವು ಕಡೆ ಹೆಚ್ಚಿನ ಜನಸಂಖ್ಯೆ ಇರುವುದರಿಂದ ತುರ್ತು ಸಂದರ್ಭದಲ್ಲಿ ತಕ್ಷಣವೇ ಸ್ಥಳಾಂತರಕ್ಕೆ ಅನುಕೂಲವಾಗುವಂತೆ ಆಯಾ ಗ್ರಾಮದಲ್ಲಿ ಬೋಟ್ ಸಜ್ಜಾಗಿಟ್ಟಿರಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪ್ರವಾಹ ಸಂದರ್ಭದಲ್ಲಿ ಜನರನ್ನು ಸ್ಥಳಾಂತರಿಸಿ ತಾತ್ಕಾಲಿಕ ವಸತಿ ಕಲ್ಪಿಸಲು ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶಗಳಿದ್ದು, ಈ ಬಗ್ಗೆ ಪರಿಶೀಲಿಸಬೇಕು ಎಂದು ಶ್ರೀ ಮಹಾಂತೇಶ ಕವಟಗಿಮಠ ತಿಳಿಸಿದರು.

ರಾಜ್ಯಸಭಾ ಸದಸ್ಯ ಶ್ರೀ ಈರಣ್ಣ ಕಡಾಡಿ ಮಾತನಾಡಿ, ನದಿ ತೀರದ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ತುರ್ತು ಸಂದರ್ಭದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ನೆರೆ ರಾಜ್ಯದ ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಈ ಬಾರಿ ಕೂಡ ಸಮಸ್ಯೆ ಉದ್ಭವಿಸದಂತೆ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಈಗಾಗಲೇ ಕಾಳಜಿ ಕೇಂದ್ರಕ್ಕಾಗಿ ಗುರುತಿಸಲಾಗಿರುವ ಯಾವುದಾದರೂ ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದರೆ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಚಿಕ್ಕೋಡಿ ಉಪ ವಿಭಾಗದಲ್ಲಿ ಇದುವರೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ಜೂನ್ ಮಾಹೆಯಲ್ಲಿ ಒಟ್ಟಾರೆ ವಾಡಿಕೆ ಮಳೆಗಿಂತ ಶೇ.94 ರಷ್ಟು ಅಧಿಕ ಮಳೆಯಾಗಿರುತ್ತದೆ.
ಸದ್ಯಕ್ಕೆ ಕೇವಲ 67 ಕ್ಯುಸೆಕ್ ನೀರಿನ ಹರಿವು ಇದೆ. ಎರಡೂವರೆ ಲಕ್ಷ ಕ್ಯೂಸೆಕ್ ನೀರಿನ ಹರಿವು ಇದ್ದರೆ ಮಾತ್ರ ಪ್ರವಾಹ ಸ್ಥಿತಿ ಉದ್ಭವಿಸುತ್ತದೆ ಎಂದು ವಿವರಿಸಿದರು.

ಎಲ್ಲ ತಾಲ್ಲೂಕುಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್. ತಂಡಗಳು ನಿಯೋಜಿಸಲಾಗಿದೆ.
ನುರಿತ ಈಜುಗಾರರನ್ನು ಗುರುತಿಸಲಾಗಿದ್ದು, ಅಗತ್ಯತೆ ಆಧರಿಸಿ ಅವರ ಸೇವೆಯನ್ನು ಪಡೆದುಕೊಳ್ಳಲಾಗುವುದು.
ಇತ್ತೀಚೆಗೆ ಸುರಿದ ಮಳೆಯಲ್ಲಿ 43 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಯುಕೇಶ್ ಕುಮಾರ್ ತಿಳಿಸಿದರು.

ಚಿಕ್ಕೋಡಿ ಉಪ ವಿಭಾಗದಲ್ಲಿ 168 ಕಾಳಜಿ ಕೇಂದ್ರಗಳನ್ನು ಸಿದ್ಧಪಡಿಸಲಾಗಿಟ್ಟುಕೊಳ್ಳಲಾಗಿದೆ ಎಂದು ಯುಕೇಶ್ ಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

";