ಸ್ಪೇಸ್ ಎಕ್ಸ್, ಟೆಸ್ಲಾ ಮೊದಲಾ ಸಂಸ್ಥೆಗಳ ಮುಖ್ಯಸ್ಥ ಇಲಾನ್ ಮಸ್ಕ್ ಅವರ ದೀರ್ಘಕಾಲದ ವಿಶ್ವ ಶ್ರೀಮಂತನೆಂಬ ಪಟ್ಟ ಕೈ ತಪ್ಪಿಹೋಗಿದೆ. ಬ್ಲೂಮ್ಬರ್ಗ್ ಮತ್ತು ಫೋರ್ಬ್ಸ್ ಎರಡೂ ಪಟ್ಟಿಗಳಲ್ಲಿ ಇಲಾನ್ ಮಸ್ಕ್ ನಂಬರ್ ಒನ್ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನಲ್ಲಿ ಇಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೆಸ್ಲಾ ಷೇರುಗಳು ಕಳೆದ ಎರಡು ದಿನಗಳಿಂದ ಭಾರೀ ಕುಸಿತ ಕಂಡಿರುವುದರಿಂದ ಮಸ್ಕ್ ಅವರ ಷೇರುಸಂಪತ್ತು ಬಹಳಷ್ಟು ಕರಗಿದ್ದು, ಅದೇ ವೇಳೆ, ಅಮೇಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಅವರು ವಿಶ್ವದ ಅತಿಶ್ರೀಮಂತನ ಸ್ಥಾನ ಗಿಟ್ಟಿಸಿದ್ದು, ಮಸ್ಕ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಮೂರನೇ ಸ್ಥಾನದಲ್ಲಿ ಬಹಳ ಸಮೀಪ ಇದ್ದಾರೆ. ಮಸ್ಕ್ ಮತ್ತು ಆರ್ನಾಲ್ಟ್ ಮಧ್ಯೆ ಒಂದು ಬಿಲಿಯನ್ ಡಾಲರ್ಷ್ಟು ಮಾತ್ರವೇ ವ್ಯತ್ಯಾಸ ಇರುವುದು.
ಇವತ್ತೂ ಕೂಡ ಟೆಸ್ಲಾ ಷೇರು ಕುಸಿತ ಹೆಚ್ಚಾಗಿ ಹೋದರೆ ಮಸ್ಕ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವುದು ನಿಶ್ಚಿತ ಎಂಬಂತಿದ್ದು, ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನಲ್ಲಿ ಜೆಫ್ ಬೇಜೋಸ್ ಷೇರುಸಂಪತ್ತು 200 ಬಿಲಿಯನ್ ಡಾಲರ್ ಇದ್ದು, ಇಲಾನ್ ಮಸ್ಕ್ ಮತ್ತು ಬರ್ನಾರ್ಡ್ ಆರ್ನಾಲ್ಟ್ ಅವರ ಷೇರುಸಂಪತ್ತು ಕ್ರಮವಾಗಿ 198 ಮತ್ತು 197 ಬಿಲಿಯನ್ ಡಾಲರ್ ಇದೆ.
ಈ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ 115 ಮತ್ತು 104 ಬಿಲಿಯನ್ ಡಾಲರ್ನೊಂದಿಗೆ ಕ್ರಮವಾಗಿ 11 ಮತ್ತು 12ನೇ ಸ್ಥಾನದಲ್ಲಿದ್ದಾರೆ.ಬ್ಲೂಮ್ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಜೆಫ್ ಬೇಜೋಸ್ ವಿಶ್ವದ ಅತಿಶ್ರೀಮಂತನಾದರೆ, ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್ ಆರ್ನಾಲ್ಟ್ ಮತ್ತು ಕುಟುಂಬ ಅಗ್ರಸ್ಥಾನದಲ್ಲಿದೆ.
ಇಲ್ಲಿ ಬ್ಲೂಮ್ಬರ್ಗ್ನವರು ಆರ್ನಾಲ್ಟ್ ಅವರ ವೈಯಕ್ತಿಕ ಸಂಪತ್ತನ್ನು ಪರಿಗಣಿಸಿದರೆ, ಫೋರ್ಬ್ಸ್ನಲ್ಲಿ ಆರ್ನಾಲ್ಟ್ ಮತ್ತು ಅವರ ಕುಟುಂಬದ ಇತರ ಸದಸ್ಯರ ಒಟ್ಟಾರೆ ಸಂಪತ್ತನ್ನು ಪರಿಗಣಿಸಿದಂತಿದೆ. ಫ್ರಾನ್ಸ್ ದೇಶದ ಈ ಉದ್ಯಮಿಯ ಒಟ್ಟು ಷೇರುಸಂಪತ್ತು 228 ಬಿಲಿಯನ್ ಡಾಲರ್.ಇಲಾನ್ ಮಸ್ಕ್ 202 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬ್ಲೂಮ್ಬರ್ಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಜೆಫ್ ಬೇಜೋಸ್ ಫೋರ್ಬ್ಸ್ ಪಟ್ಟಿಯಲ್ಲಿ 198 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 3ನೇ ಸ್ಥಾನದಲ್ಲಿದ್ದಾರೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.