ಬೆಂಗಳೂರು: ಬಚ್ಚನ್ ಕುಟುಂಬ ಭಾನುವಾರ ಸಂಜೆ ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಕುಟುಂಬ ಸದಸ್ಯರ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಹೇರ್‌ಸ್ಟೈಲ್ ಹೈಲೈಟ್ ಆಗಿದ್ದು, ಅಂತೂ ಹೇರ್ ಸ್ಟೈಲ್ ಚೇಂಜ್ ಆಯ್ತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ ನೆಟ್ಟಿಗರು!
ಕೆಲವು ವರ್ಷಗಳಿಂದ ಆರಾಧ್ಯ ಅವರು ಯಾವಾಗಲೂ ಒಂದೇ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಈಗ ಫ್ರೀ ಹೇರ್ಸ್ ಬಿಟ್ಟು ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ ಆರಾಧ್ಯ. ಆರಾಧ್ಯ ಅವರ ಹೊಸ ಕೇಶ ವಿನ್ಯಾಸಕ್ಕೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಯೊಬ್ಬರು, “ಆ ಬ್ಯಾಂಗ್ಸ್ ಇಲ್ಲದೆ ಆರಾಧ್ಯ ತುಂಬಾ ಸುಂದರವಾಗಿ ಕಾಣುತ್ತಾಳೆ” ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ʻಐಶ್ವರ್ಯಾ ಅವರ ಪ್ರತಿರೂಪ. ಈಗ ಐಶ್ವರ್ಯಾ ಚಿಕ್ಕವಳಂತೆ ಕಾಣುತ್ತಾಳೆʼʼಎಂದು ಕಮೆಂಟ್ ಮಾಡಿದ್ದಾರೆ.
ಪಾರ್ಟಿಗಾಗಿ ಆರಾಧ್ಯ ಗುಲಾಬಿ ಮತ್ತು ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಐಶ್ವರ್ಯಾ ಕ್ರೀಂ ಕಲರ್ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು.
ಶಾರುಖ್, ಸಲ್ಮಾನ್ ಮತ್ತು ಆಮೀರ್ ಹೊರತುಪಡಿಸಿ, ಹಲವಾರು ಬಾಲಿವುಡ್ ತಾರೆಯರು ಈವೆಂಟ್‌ನಲ್ಲಿ ಕಾಣಿಸಿಕೊಂಡರು. ಇವರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಆಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ವರುಣ್ ಧವನ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಸೇರಿದ್ದಾರೆ. ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹಾಜರಿದ್ದರು. ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಕ್ರೀಡಾಪಟುಗಳು ಕೂಡ ಆಚರಣೆಯಲ್ಲಿ ಭಾಗವಹಿಸಿದ್ದರು.