ನಿಮ್ಮ ಸುದ್ದಿ ಬಾಗಲಕೋಟೆ
ಕೊರೊನಾ ನಿರೋಧಕ ಲಸಿಕೆ ಅಭಿಯಾನ ಯಶಸ್ವಿಯಾಗಲು ಸ್ಥಳೀಯ ಜನಪ್ರತಿನಿಧಿಗಳ ಕಾರ್ಯ ಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಜನರಿಂದ ಆಯ್ಕೆ ಆದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ಜನತೆ ಲಸಿಕೆ ಪಡೆಯುವಂತೆ ಜಾಗೃತಿ ವಹಿಸಬೇಕು. ನಮ್ಮ ಮಾತು ಕೇಳದಿದ್ದರೂ ಅವರಿಂದ ಆಯ್ಕೆ ಆದ ನಿಮ್ಮ ಮಾತು ಹೆಚ್ಚು ಕೇಳುತ್ತಾರೆ. ಕೊರೊನಾ ತಡೆಯುವಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರವೂ ದೊಡ್ಡದಾಗಿದೆ ಎಂದರು.
ಲಸಿಕೆಯಿಂದ ಯಾರೂ ವಂಚಿತರಾಗದಂತೆ ಎಚ್ಚರ ವಹಿಸಿ. ಹಲವು ಕಡೆ ಭಿಕ್ಷುಕರು, ಅಲೆಮಾರಿಗಳು, ವಿಶೇಷಚೇತನರು, ರೈತಾಪಿ ವರ್ಗ ಸೇರಿದಂತೆ ಇತರರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಂತಹ ಅವಧಿಯಲ್ಲಿ ಅವರಿದ್ದಲ್ಲಿಗೆ ತೆರಳಿ ಲಸಿಕೆ ನೀಡುವ ಕಾರ್ಯ ನಡೆಯಬೇಕು.
ಲಸಿಕೆ ಹಾಳಾಗದಂತೆ ಎಚ್ಚರ ವಹಿಸಿ. ಜಿಲ್ಲೆಯಲ್ಲಿ ೪೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶೇ.೫೫ರಷ್ಟು ಲಸಿಕಾಕರಣ ಪೂರ್ಣಗೊಂಡಿದ್ದು ಜೂ.೨೧ರಿಂದ ಆರಂಭವಾಗುವ ೧೮-೪೪ ವರ್ಷದೊಳಗಿನವರಿಗೆ ಲಸಿಕೆ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಟ್ಟುಕೊಳ್ಳಿ ಎಂದು ಹೇಳಿದರು.
ಹುನಗುಂದ ತಹಸೀಲ್ದಾರ್ ಶ್ವೇತಾ ಬಿಡಿಕರ ಮಾತನಾಡಿ, ೨ನೇ ಡೋಸ್ ಅವಧಿ ಬಂದಾಗ ಆಶಾ ಕಾರ್ಯಕರ್ತೆಯರು ಮನೆಗೆ ತೆರಳಿ ಲಸಿಕೆ ಪಡೆಯುವಂತೆ ಸೂಚಿಸುತ್ತಾರೆ. ಲಸಿಕೆ ಕುರಿತು ಇಂದಿಗೂ ಗ್ರಾಮೀಣ ಭಾಗದಲ್ಲಿ ಸ್ಪಲ್ಪ ಹಿಂಜರಿಕೆಯಿದ್ದು ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಲಸಿಕೆ ಪಡೆದವರಿಂದಲೇ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತೇವೆ. ಪಟ್ಟಣದಲ್ಲಿ ೨ನೇ ಅಲೆಯಲ್ಲಿ ೧೯೩ ಜನರಲ್ಲಿ ಪಾಸಿಟಿವ್ ಕಂಡು ಬಂದಿದ್ದು ೩ ಜನ ಮೃತಪಟ್ಟಿದ್ದಾರೆ. ೩-೪ ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.
ತಾಪಂ ಇಒ ಸಿ.ಬಿ.ಮ್ಯಾಗೇರಿ ಸ್ಥಳೀಯ ಜನಪ್ರತಿಧಿಗಳು ಉತ್ಸಾಹಿಗಳಿದ್ದು ಪಟ್ಟಣದ ಜನತೆಗೆ ಕೋವಿಡ್ ಲಸಿಕೆ ದೊರಕಿಸುವಲ್ಲಿ ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಆ ಮೂಲಕವಾದರೂ ಇಲ್ಲಿನ ಸದಸ್ಯರು ಇತರರಿಗೆ ಮಾದರಿಯಾಗಲಿ ಎಂದರು.
ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಬಿ.ಕೊಂಗವಾಡ, ವೈದ್ಯಾಧಿಕಾರಿ ಡಾ.ರಾಘವೇಂದ್ರ ಸವದತ್ತಿ, ಕಂದಾಯ ನಿರೀಕ್ಷಕ ಜಂಜುನಾಥ ಚಿನಿವಾಲರ, ಪಪಂ ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಸದಸ್ಯರಾದ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಗ್ರಾಮಲೆಕ್ಕಿಗ ಸುರೇಶ ಹುದ್ದಾರ ಇತರರು ಇದ್ದರು.