ಆಲೂಗಡ್ಡೆಯನ್ನು ಸಿಪ್ಪೆ ಸುಲಿದೇ ಅಡುಗೆಗೆ ಬಳಸುತ್ತಿದ್ದು, ವಾಸ್ತವದಲ್ಲಿ, ಇದರ ಸಿಪ್ಪೆ ಕರಗದ ನಾರಿನಂಶ, ಆಂಟಿ ಆಕ್ಸಿಡೆಂಟುಗಳು ಮತ್ತು ಪೊಟ್ಯಾಶಿಯಂಗಳ ಆಗರವಾಗಿದ್ದು ಹೃದಯ, ತ್ವಚೆ ಹಾಗೂ ಜೀರ್ಣಾಂಗಳ ಆರೋಗ್ಯಕ್ಕೆ ಅತಿ ಹೆಚ್ಚಿನ ಪೋಷಣೆ ಒದಗಿಸುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಕ್ಲೋರೋಜೆನಿಕ್ ಆಮ್ಲ ಮತ್ತು ಕ್ಯಾಫಿಕ್ ಆಮ್ಲಗಳು ಪ್ರಬಲ ಉರಿಯೂತ ನಿವಾರಕ ಗುಣ ಹೊಂದಿದ್ದು, ಸಾವಯವ ವಿಧಾನದಲ್ಲಿ ಬೆಳೆದ ಮತ್ತು ಚೆನ್ನಾಗಿ ಸ್ವಚ್ಛಮಾಡಿರುವ ಆಲೂಗಡ್ಡೆಗಳು ರುಚಿಯ ಜೊತೆಗೇ ಪೌಷ್ಟಿಕ ಮೌಲ್ಯಗಳನ್ನೂ ಹೆಚ್ಚಿಸುತ್ತವೆ.
ಆಲೂಗಡ್ಡೆಯ ಸಿಪ್ಪೆ ಬಹುತೇಕ ಕರಗದ ಹಾಗೂ ಕೊಂಚ ಕರಗುವ ನಾರಿನಂಶವನ್ನು ಹೊಂದಿದ್ದು, ಕರಗದ ನಾರಿನಂಶ ನಮ್ಮ ಜೀರ್ಣಾಂಗಗಳಲ್ಲಿ ಕರಗದೇ ಆಹಾರವನ್ನು ಕರುಳು ಮತ್ತು ಜಠರದಲ್ಲಿ ಸುಲಭವಾಗಿ ಚಲಿಸಲು ಹಾಗೂ ಮಲವಿಸರ್ಜನೆಯನ್ನು ಸುಲಭವಾಗಿಸುತ್ತವೆ. ಕರಗುವ ನಾರಿನಂಶ ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆಗೊಳಿಸಲು ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸಲು ನೆರವಾಗುತ್ತದೆ.
ಆಲೂಗಡ್ಡೆಯ ಸಿಪ್ಪೆಯಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳಿವೆ. ಫ್ಲೇವನಾಯ್ಡುಗಳು, ಕ್ಯಾರೋಟಿನಾಯ್ಡುಗಳು ಹಾಗೂ ಫೆನಾಲಿಕ್ ಸಂಯುಕ್ತಗಳು ಇವುಗಳಲ್ಲಿ ಪ್ರಮುಖವಾಗಿವೆ. ಇವು ದೇಹದಲ್ಲಿರುವ ಕ್ಯಾನ್ಸರ್‌ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ತಟಸ್ಥಗೊಳಿಸಿ ಉತ್ಕರ್ಷಣಶೀಲ ಒತ್ತಡವನ್ನು ಕಡಿಮೆ ಮಾಡುತ್ತವೆ ಹಾಗೂ ಹೃದಯದ ಕಾಯಿಲೆ, ಕ್ಯಾನ್ಸರ್ ಮತ್ತು ನರಗಳ ಶಿಥಿಲವಾಗುವಿಕೆ ಮೊದಲಾದ ಕಾಯಿಲೆಗಳ ವಿರುದ್ದ ರಕ್ಷಣೆ ನೀಡುತ್ತವೆ.
ಆಲೂಗಡ್ಡೆಯನ್ನು ನಾವು ಹೆಚ್ಚಾಗಿ ಸಿಪ್ಪೆ ಸುಲಿಯದೇ ಅಡುಗೆಗೆ ಬಳಸುವುದೇ ಇಲ್ಲ. ಅದರಲ್ಲೂ ಆಲೂಗಡ್ಡೆ ಎಂದರೆ ಭಾರತೀಯ ಹಲವು ಖಾದ್ಯಗಳಿಗೆ ಬೇಕಾದ ಮೂಲವಸ್ತು. ಆಲೂ ಗೋಬಿ, ಆಲೂ ಮಟರ್ ಹೀಗೆ ಪ್ರಾರಂಭಿಸಿದರೆ ಖಾದ್ಯಗಳ ಸಂಖ್ಯೆ ಹಲವಾರಿವೆ. ಆದರೆ, ಇವುಗಳಲ್ಲಿ ಸಿಪ್ಪೆಗೆ ಯಾವುದೇ ಸ್ಥಾನ ಇಲ್ಲದ ಕಾರಣ ನಾವು ಈ ಅಮೂಲ್ಯ ನಿಧಿಯಿಂದ ವಂಚಿತರಾಗಿದ್ದೇವೆ.