This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local NewsPolitics NewsState News

ರಾಜ್ಯದಲ್ಲಿ ಮತ್ತೆ ತೇಜಸ್ವಿನಿ ಕಂಪನ; ಡಿ.ಕೆ. ಶಿವಕುಮಾರ್‌ ಭೇಟಿಯಿಂದ ಸಂಚಲನ!

ರಾಜ್ಯದಲ್ಲಿ ಮತ್ತೆ ತೇಜಸ್ವಿನಿ ಕಂಪನ; ಡಿ.ಕೆ. ಶಿವಕುಮಾರ್‌ ಭೇಟಿಯಿಂದ ಸಂಚಲನ!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಈಗ ಆಪರೇಷನ್‌ ಹಸ್ತದ್ದೇ (Operation Hasta) ಮಾತುಕತೆ ನಡೆಯುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕರ್ನಾಟಕದಲ್ಲಿ ಕನಿಷ್ಠ 20 ಕ್ಷೇತ್ರವನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿರುವ ಕಾಂಗ್ರೆಸ್‌ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. ಜತೆಗೆ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿಯೂ ಇದೆ. ಈ ನಡುವೆ ಕೇಂದ್ರ ಮಾಜಿ ಸಚಿವ ದಿ. ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ (Tejaswini Ananth Kumar) ಅವರು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರನ್ನು ಸೋಮವಾರ (ಸೆಪ್ಟೆಂಬರ್‌ 4) ಭೇಟಿ ಮಾಡಿರುವುದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಈ ಭೇಟಿಯ ಹಿಂದೆ ಈಗ ರಾಜಕೀಯ ಲೆಕ್ಕಾಚಾರಗಳೂ ಶುರುವಾಗಿದೆ.

ದಿ. ಅನಂತಕುಮಾರ್‌ ಅವರು ರಾಜ್ಯ ರಾಜಕೀಯದ ಜತೆಗೆ ರಾಷ್ಟ್ರ ರಾಜಕಾರಣದಲ್ಲಿಯೂ (National Politics) ತಮ್ಮದೇ ಛಾಪು ಮೂಡಿಸಿದ್ದರು. ಕೇಂದ್ರ ಸಚಿವರೂ ಆಗಿದ್ದ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದರು. ಅವರ ನಂತರ ಈ ಕ್ಷೇತ್ರಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ಸಿಗುತ್ತದೆ ಎಂದು ಹೇಳಲಾಗಿತ್ತಾದರೂ, ಕೊನೇ ಘಳಿಗೆಯಲ್ಲಿ ತೇಜಸ್ವಿ ಸೂರ್ಯ (MP Tejasvi Surya) ಅವರಿಗೆ ಟಿಕೆಟ್‌ ಸಿಕ್ಕು ಜಯ ಗಳಿಸಿದ್ದರು. ಆದರೆ, ತೇಜಸ್ವಿನಿ ಸಹ ಬೆಂಗಳೂರು ದಕ್ಷಿಣ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಬಿಜೆಪಿಗೆ ಟಿಕೆಟ್‌ ನೀಡುವ ಬಗ್ಗೆ ಇನ್ನೂ ಯಾವುದೇ ಖಚಿತ ಸಂದೇಶವನ್ನು ನೀಡಿಲ್ಲ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

Tejaswini Ananth Kumar meets DK Shivakumar
ತೇಜಸ್ವಿನಿ ಅನಂತಕುಮಾರ್‌ ಅವರು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಕೆಕೆ ಗೆಸ್ಟ್‌ಹೌಸ್‌ನಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಕೆಲವು ಫೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದು, ಚರ್ಚೆ ನಡೆಸಿದ್ದಾರೆ. ಇದೀಗ ರಾಜಕೀಯ ಕ್ಷೇತ್ರದಲ್ಲಿ ಹೊಸ ಕಂಪನಕ್ಕೆ ಕಾರಣವಾಗಿದೆ.

ಬಿಜೆಪಿ ವಿರುದ್ಧ ಧ್ವನಿ ಎತ್ತಿರುವ ಮಗಳು ವಿಜೇತಾ
ತೇಜಸ್ವಿನಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗದೇ ಇರುವುದು ಅವರ ಕುಟುಂಬದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯನಗರದಿಂದ ತೇಜಸ್ವಿನಿಗೆ ಬಿಜೆಪಿ ಟಿಕೆಟ್‌ ಸಿಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಅಲ್ಲಿಯೂ ಸಹ ಅವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಆದರೆ, ಈ ಬಗ್ಗೆ ತೇಜಸ್ವಿನಿ ಅವರು ಎಲ್ಲಿಯೂ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿರಲಿಲ್ಲ. ಈ ನಡುವೆ ಅವರ ಪುತ್ರಿ ವಿಜೇತಾ ಅನಂತಕುಮಾರ್ (Vijeta Ananth Kumar) ಅವರು ಮಾಡಿದ್ದ ಟ್ವೀಟ್ ಗಮನ ಸೆಳೆದಿತ್ತು.

ನನ್ನ ತಂದೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ, ಅವರನ್ನು ಈಗ ಮರೆಯುತ್ತಿರುವ ಆ ಪಕ್ಷವು ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಿದೆ. ಅನಂತಕುಮಾರ್‌ ಅವರಿಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ ಎಂಬ ಪತ್ರಿಕೆಯೊಂದರ ವರದಿಯನ್ನು ಪೋಸ್ಟ್‌ ಮಾಡಿ ಟ್ವೀಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಜೆಡಿಎಸ್‌ ಪರವಾಗಿಯೂ ಮಾತನಾಡಿದ್ದರು. ಅಲ್ಲದೆ,‌ ತೇಜಸ್ವಿನಿ ಅವರು ಐದಾರು ತಿಂಗಳ ಹಿಂದೆ, “ಅನಂತಕುಮಾರ್‌ ನೆಟ್ಟ ಗಿಡ ಒಣಗುತ್ತಿದೆ” ಎಂದು ಒಂದು ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದರು. ಈ ಹೇಳಿಕೆಯನ್ನು ರಾಜಕೀಯಕ್ಕೆ ತಿರುಗಿಸಲಾಗಿತ್ತು.

ಪಿಎಂ ಮೋದಿಯನ್ನು ಭೇಟಿ ಮಾಡಿದ್ದ ತೇಜಸ್ವಿನಿ
ಈ ಎಲ್ಲ ಬೆಳವಣಿಗೆಗಳ ನಡುವೆ 2 ತಿಂಗಳ ಹಿಂದಷ್ಟೇ (ಜುಲೈ 20) ತೇಜಸ್ವಿನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವ ದೆಹಲಿಯ ಪ್ರಧಾನ ಮಂತ್ರಿ ಕಚೇರಿಯಲ್ಲಿ ಭೇಟಿಯಾಗಿ ಬಂದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತೇಜಸ್ವಿನಿ, “ಅನಂತ್ ಕುಮಾರ್ ಹಾದಿಯಲ್ಲಿ ಹೋಗುತ್ತಿದ್ದೇನೆ. ಯಾವುದೇ ಆಕಾಂಕ್ಷೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ಅವರು ಹೇಳುತ್ತಿದ್ದರು. ಹಿಂದೆಯೂ ನಾನು ಅವಕಾಶ ಕೇಳಿಲ್ಲ, ಈಗಲೂ ಕೇಳಲ್ಲ. ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ಅವಕಾಶ ಕೊಟ್ಟರೆ ನೋಡೋಣ. ಎಲ್ಲದಕ್ಕೂ ಸಮಯ ಉತ್ತರ ಕೊಡಲಿದೆ” ಎಂದು ಹೇಳಿಕೆ ನೀಡಿದ್ದರು.

ಈ ಭೇಟಿ ಬಳಿಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿ ಹಾಲಿ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರಿಗೆ ಕೊಕ್‌ ನೀಡಿ, ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ಚರ್ಚೆಗಳು ಪಕ್ಷದ ವಲಯದಲ್ಲಿ ಹರಿದಾಡಿದ್ದವು. ಇದಕ್ಕೆ ಪೂರಕವೆಂಬಂತೆ ತೇಜಸ್ವಿನಿ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಈಗ ಡಿ.ಕೆ. ಶಿವಕುಮಾರ್‌ ಜತೆಗಿನ ಭೇಟಿ ಕುತೂಹಲವನ್ನು ಹುಟ್ಟುಹಾಕಿದೆ.

ಡಿಕೆ ಶಿವಕುಮಾರ್‌ ಸ್ಪಷ್ಟನೆ
ತೇಜಸ್ವಿನಿ ಅನಂತ್ ಕುಮಾರ್ ಜತೆ ರಾಜಕೀಯ ವಿಚಾರ ಚರ್ಚೆ ಎಂಬುದಾಗಿ ಟ್ವೀಟ್ ಮಾಡಿರುವ ವಿಚಾರದ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ನಾನು ಆ ಹೆಣ್ಣು ಮಗಳ ಜತೆ ಯಾವುದೇ ರಾಜಕೀಯ ವಿಚಾರವನ್ನು ಚರ್ಚೆ ಮಾಡಿಲ್ಲ. ದಯಮಾಡಿ ನಾನು ಕ್ಷಮೆ ಕೇಳುತ್ತೇನೆ. ನಾನು ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ಅನಂತ್ ಕುಮಾರ್ ಅವರ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಿದ್ದಾರೆ. ಆ ರೀತಿ ಟ್ವೀಟ್ ಆಗಿದ್ದರೆ ಕ್ಷಮೆ ಇರಲಿ. ನನ್ನ ಹೆಸರಲ್ಲಿ ಟ್ವೀಟ್ ಮಾಡಿದ್ದರೆ, ಹಾಗೆ ಮಾಡಿದವರನ್ನ ಕೂಡಲೇ ತೆಗೆದುಹಾಕುತ್ತೇನೆ ಎಂದು ಹೇಳಿದ್ದಾರೆ.

 

ಪತ್ರಿಕಾ ವಿತರಿಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Nimma Suddi
";