ನಿಮ್ಮ ಸುದ್ದಿ ಬಾಗಲಕೋಟೆ
ಶತಮಾನ ಕಂಡಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಜಿಲ್ಲಾ ಘಟಕಕ್ಕೆ ಪೂರ್ಣಾವಧಿ ಕನ್ನಡ ಸೇವಕನಾಗಿ ಕಾರ್ಯ ನಿರ್ವಹಿಸಲು ಕನ್ನಡದ ಮನಸ್ಸುಗಳು ಮುಂದಾಗಬೇಕು ಎಂದು ಹಿರಿಯ ರಂಗಕರ್ಮಿ ಎಂ.ಎಂ.ಗಜೇಂದ್ರಗಡ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮೇ ೯ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿದೆಡೆ ಮತ ಯಾಚನೆ ಮಾಡಿ ಅವರು ಮಾತನಾಡಿದರು. ಶತಮಾನ ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಾಗಿ ತಮ್ಮನ್ನೇ ಅರ್ಪಿಸಿಕೊಂಡ ಹಲವಾರು ಮಹನೀಯರ ಪ್ರಯತ್ನ, ದುಡಿಮೆಯ ಫಲವಿಂದ ಇಂದು ಪರಿಷತ್ ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಪರಿಷತ್ ಸಾಹಿತ್ಯದೊಂದಿಗೆ ಕನ್ನಡದ ಅಸ್ಮಿತೆ, ಸಂಸ್ಕೃತಿಯ ಉಳಿವಿಗಾಗಿಯೂ ಕೆಲಸ ಮಾಡುತ್ತಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಗಲಕೋಟೆ ಜಿಲ್ಲೆಯ ಪರಿಷತ್ ಕಾರ್ಯ ಚಟುವಟಿಕೆ ಗಮನಿಸಿದರೆ ಸಂಸ್ಥೆಯ ಧ್ಯೇಯ, ಉದ್ದೇಶಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಪೂರ್ಣಾವಧಿ, ಸಮರ್ಪಣಾ ಮನೋಭಾವದ ಕನ್ನಡದ ಪರಿಚಾರಕನ ಅಗತ್ಯವಿದೆ ಎನಿಸುತ್ತಿದೆ. ಇಂತಹದ್ದೇ ಅಭಿಪ್ರಾಯವನ್ನು ಪರಿಷತ್‌ನ ನೂರಾರು ಸದಸ್ಯರು ಹೊಂದಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಕನ್ನಡದ ಪೂರ್ಣಾವಧಿ ಸೇವಕನಾಗಿ ಕೆಲಸ ಮಾಡುವ ಅಭಿಲಾಸೆಯಿಂದ ಮೇ ೯ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ ಎಂದು ಹೇಳಿದರು.
ಕಳೆದ ೪ ದಶಕದಿಂದ ಸಾಹಿತ್ಯ, ನಾಟಕ ಸೇರಿದಂತೆ ಕನ್ನಡದ ಹಲವು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇನೆ. ಪ್ರಜ್ಞಾವಂತರಾದ ತಾವುಗಳು ಕನ್ನಡದ ಸೇವೆಗೆ ಪೂರ್ಣಾವಧಿ ಸೇವಕನೊಬ್ಬನ ಅಗತ್ಯ ಮನಗಂಡು ಮತ ನೀಡಿ ಆಶೀರ್ವದಿಸುತ್ತೀರಿ ಎಂದು ನಂಬಿದ್ದೇನೆ ಎಂದು ತಿಳಿಸಿದರು.