ನಿಮ್ಮ ಸುದ್ದಿ ಬಾಗಲಕೋಟೆ
ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಅವಶ್ಯವಾಗಿದ್ದು, ಮತದಾನ ಮಹತರ್ವದ ಬಗ್ಗೆ ಯುವಕರಲ್ಲಿ ಅರಿವು ಮುಖ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿಂದು ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುವ ಉದ್ದೇಶ ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ತಿಳಿಸಿದರು.
ಉತ್ತಮವಾದ ಆಡಳಿತಗಾರರನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವದಲ್ಲಿ ಮತದಾನದ ಮೂಲಕ ಅವಕಾಶ ಕಲ್ಪಿಸಿದ್ದು, ಮತ ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಹಕ್ಕು ಹಾಗೂ ಕರ್ತವ್ಯವಾಗಿದೆ. ದೇಶಕ್ಕೆ ಒಳ್ಳೆಯ ಆಡಳಿತವನ್ನು ತರಲು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಯುವ ಜನತೆ ಮತದಾನದ ಮಹತ್ವವನ್ನು ಅರಿತು ಮತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ ಸಿ.ಬಿ ಮಾತನಾಡಿ ಮತದಾನವು ಕೂಡಾ ಒಂದು ಮೂಲಭೂತ ಹಕ್ಕಾಗಿದ್ದು, ಇಂದಿನ ವಿದ್ಯಾರ್ಥಿಗಳು ನಾಳಿನ ಪ್ರಜೆಗಳಾಗಿದ್ದಾರೆ. ಇಂತಹ ಮತದಾನದ ಮಹತ್ವ ಅರಿತುಕೊಂಡು ಇತರರಿಗೆ ಹಂಚಿಕೊಳ್ಳುವ ಮೂಲಕ ಅರಿವು ಮೂಡಿಸಿ ಪರಿವರ್ತನೆಗೆ ಮುಂದಾಗಬೇಕು. ಅಂದಾಗ ಮಾತ್ರ ದೇಶದ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಪ್ರತಿಜ್ಞಾವಿಧಿ ಬೋಧಿಸಿ ನಂತರ ಮಾತನಾಡಿದ ಅವರು ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಇದ್ದೇ ಇರುತ್ತಾರೆ. ವಿದ್ಯಾವಂತರು ಮತದಾನದ ಮಹತ್ವವನ್ನು ಅರಿತು ಜಾಗೃತಗೊಂಡು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಇದರಿಂದ ಒಳ್ಳೆಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಯುವ ಮತದಾರರಿಗೆ ಜನವರಿ 25 ರಿಂದ 31 ವರೆಗೆ ಚುನಾವಣಾ ಆಯೋಗದ ವೆಬ್‍ಸೈಟ್ ಮೂಲಕ ಎಪಿಕ್ ಕಾರ್ಡ ಡೌಲನ್‍ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಂ.ಎಸ್.ಅಂಗಡಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಆಡಳಿತದಲ್ಲಿ ಪಾಲ್ಗೊಳ್ಳಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮತದಾರರು ತಮ್ಮ ಅಮೂಲ್ಯವಾದ ಹಕ್ಕನ್ನು ಉತ್ತಮ ವ್ಯಕ್ತಿಯ ಆಯ್ಕೆ ಮಾಡುವಾಗ ತಪ್ಪದೇ ಮತ ಚಲಾಯಿಸಬೇಕು. ಬೇರೆ ರಾಷ್ಟ್ರಕ್ಕಿಂತ ಶ್ರೇಷ್ಠವಾದ ಪ್ರಜಾಪ್ರಭುತ್ವ ನಮ್ಮ ದೇಶವಾಗಿದೆ. ಮತ ಚಲಾಯಿಸುವವರು ಮತದಾನ ಮಹತ್ವ, ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗಳ ಬಗ್ಗೆ ತಿಳಿಯಬೇಕು.
ಇದೇ ಸಂದರ್ಭದಲ್ಲಿ ಹೊಸದಾಗಿ ನೊಂದಾಯಿತ ಮತದಾರರಿಗೆ ಸಾಂಕೇತಿಕವಾಗಿ ಎಪಿಕ್ ಕಾರ್ಡಗಳನ್ನು ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಪ್ರಬಂಧ, ಭಿತ್ತಿಚಿತ್ರ & ಕೋಲಾಜ್ ಹಾಗೂ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮತ್ತು ಉತ್ತಮ ಮತಗಟ್ಟೆ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಚುನಾವಣಾ ತಹಶೀಲ್ದಾರ ಮೋಹನ್ ನಾಗಠಾಣ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ಜಾಸ್ಮೀನ್ ಕಿಲ್ಲೆದಾರ, ಸಂಜಯ ನಡುವಿನಮನಿ ಕಾರ್ಯಕ್ರಮ ನಿರೂಪಿಸಿದರು.