2024ರ ಟಿ20 ವಿಶ್ವಕಪ್ (T20 World Cup) ಪಂದ್ಯಾವಳಿಗೆ ಉತ್ತರ ಪಾಕಿಸ್ತಾನ ಕಡೆಯಿಂದ ಭಯೋತ್ಪಾದಕ ದಾಳಿ ಬೆದರಿಕೆ ಬಂದಿರುವ ಕುರಿತಾಗಿ ಬಿಸಿಸಿಐ ಪ್ರತಿಕ್ರಿಯೆ ನೀಡಿದೆ. ಸಂಭಾವ್ಯ ಉಗ್ರ ದಾಳಿ ವರದಿ ಬೆನ್ನಲ್ಲೇ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ಟೂರ್ನಿಯನ್ನು ಐಸಿಸಿ ಆಯೋಜಿಸುತ್ತಿದ್ದು, ಭದ್ರತೆಯ ಜವಾಬ್ದಾರಿ ಪಂದ್ಯಗಳನ್ನು ನಡೆಸುವ ಆತಿಥೇಯ ರಾಷ್ಟ್ರದ ಕೈಯಲ್ಲಿದೆ. ಅಂತಿಮವಾಗಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಭಾಗವಹಿಸಬೇಕೇ ಬೇಡವೇ ಎಂಬ ಕುರಿತ ಅಂತಿಮ ನಿರ್ಧಾರವನ್ನು ಭಾರತದ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಈ ವರ್ಷದ ಮಹತ್ವದ ಕ್ರಿಕೆಟ್ ಟೂರ್ನಿಯಾಗಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ಕೆಲವೇ ವಾರಗಳು ಬಾಕಿ ಉಳಿದಿವೆ. ಈ ನಡುವೆ ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಪಂದ್ಯಗಳಿಗೆ ಭಯೋತ್ಪಾದಕ ದಾಳಿಯ ಬೆದರಿಕೆಯೊಡ್ಡಿರುವ ಕುರಿತು ವರದಿಯಾಗಿದೆ. ಉತ್ತರ ಪಾಕಿಸ್ತಾನ ಕಡೆಯಿಂದ ಮಾಧ್ಯಮ ಮೂಲಗಳಿಂದ ಬೆದರಿಕೆಗಳು ಬಂದಿರುವುದಾಗಿ ಗುಪ್ತಚರ ಸಂಸ್ಥೆಗಳು ಸೂಚಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಆತಿಥೇಯ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಎಚ್ಚರಿಕೆಯಿಂದ ಕ್ರಮ ಕೈಗೊಂಡಿದೆ. ಟ್ರಿನಿಡಾಡ್ ಪ್ರಧಾನಿ ಡಾ.ಕೀತ್ ರೌಲಿ ಅವರು, ಉಗ್ರ ದಾಳಿಯ ಅಪಾಯವನ್ನು ನಿಗ್ರಹಿಸಲು ರಾಷ್ಟ್ರೀಯ ಮಟ್ಟದಲ್ಲಿ ಭದ್ರತೆ ಕುರಿತು ಸಿದ್ಧತೆ ನಡೆದಿದೆ ಎಂದು ಹೇಳಿದ್ದಾರೆ.
ಇತ್ತ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಶುಕ್ಲಾ, “ಬೆದರಿಕೆಗೆ ಸಂಬಂಧಿಸಿದಂತೆ ಪಂದ್ಯಾವಳಿಗೆ ಸೂಕ್ತ ಭದ್ರತೆ ಒದಗಿಸುವ ಜವಾಬ್ದಾರಿಯು ಟೂರ್ನಿಯನ್ನು ಆಯೋಜಿಸುತ್ತಿರುವ ದೇಶದ ಭದ್ರತಾ ಸಂಸ್ಥೆಗಳ ಮೇಲಿದೆ. ನಮ್ಮ ಕಡೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಆಟಗಾರರು ಮತ್ತು ಪ್ರೇಕ್ಷಕರ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ. ವಿಶ್ವಕಪ್ ನಡೆಸುವ ಜವಾಬ್ದಾರಿಯುತ ಏಜೆನ್ಸಿಗಳೊಂದಿಗೆ ನಾವು ಮಾತನಾಡುತ್ತೇವೆ. ಆದರೆ, ತಂಡವನ್ನು ಅಲ್ಲಿಗೆ ಕಳುಹಿಸುವ ಕುರಿತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಪ್ರಕಾರ ನಾವು ಮುಂದುವರೆಯುತ್ತೇವೆ. ನಾವು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಅವರು ಹೇಳಿದ್ದಾರೆ.
ಚುಟುಕು ವಿಶ್ವಸಮರವು ಜೂನ್ 1ರಿಂದ ಆರಂಭವಾಗಲಿದೆ. ಭಾರತ ಸೇರಿದಂತೆ ಒಟ್ಟು 20 ದೇಶಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಉಗ್ರ ಬೆದರಿಕೆಯು ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಪಂದ್ಯಗಳಿಗೆ ಮಾತ್ರವೇ ಇದೆ. ಅಮೆರಿಕದ ಆತಿಥ್ಯ ಸ್ಥಳಗಳಿಗೆ ಯಾವುದೇ ಬೆದರಿಕೆಯಿಲ್ಲ.
ಬೆದರಿಕೆ ಒಡ್ಡಿರುವ ಯಾವುದೇ ಸಂಘಟನೆಯ ಹೆಸರನ್ನು ವಿಂಡೀಸ್ ಬಹಿರಂಗಪಡಿಸಿಲ್ಲ. ಆದರೆ, ಇಸ್ಲಾಮಿಕ್ ಸ್ಟೇಟ್ ತನ್ನ ಪ್ರಚಾರ ಚಾನೆಲ್ ಮೂಲಕ ಬೆದರಿಕೆ ಹಾಕಿದೆ ಎಂದು ವರದಿಗಳು ತಿಳಿಸಿವೆ. ಕ್ರಿಕ್‌ಬಜ್ ವರದಿ ಪ್ರಕಾರ, ಇಸ್ಲಾಮಿಕ್ ಸ್ಟೇಟ್ (ಐಎಸ್) ಪರ ಮಾಧ್ಯಮ ಮೂಲಗಳು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಬೆದರಿಕೆ ಹಾಕಿದೆ.
ಐಸಿಸಿ ಹೇಳಿದ್ದೇನು?
“ಬೆದರಿಕೆ ವರದಿಗಳ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಆತಿಥೇಯ ರಾಷ್ಟ್ರಗಳೊಂದಿಗೆ ಐಸಿಸಿ ನಿಕಟ ಸಂಪರ್ಕದಲ್ಲಿದೆ. ನಾವು ವೆಸ್ಟ್ ಇಂಡೀಸ್ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದು. ಯಾವುದೇ ಅಪಾಯವನ್ನು ಎದುರಿಸಲು ಸೂಕ್ತ ಭದ್ರತಾ ಯೋಜನೆಯು ಜಾರಿಯಲ್ಲಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಭರವಸೆ ನೀಡಿದೆ,” ಎಂದು ಐಸಿಸಿ ತಿಳಿಸಿದೆ.