ಉದ್ಯೋಗ ಖಾತ್ರಿ ರೈತರಿಗೆ ವರದಾನ
ನಿಮ್ಮ ಸುದ್ದಿ ಬಾಗಲಕೋಟೆ
ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕೃಷಿ ಚಟುವಟಿಕೆಗೆ ಅವಕಾವಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಐಹೊಳೆ ಪಿಡಿಒ ಮಹಾಂತೇಶ ಗೋಡಿ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಗ್ರಾಮ ಪಂಚಾಯಿತಿ ವತಿಯಿಂದ ಜರುಗಿದ ಗ್ರಾಮಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರದ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂ ವ್ಯಾಪ್ತಿಯ ಸಣ್ಣ, ಅತಿ ಸಣ್ಣ ರೈತರಿಗೆ ಹಾಗೂ ಎಪಿಎಲ್, ಬಿಪಿಎಲ್ ಕುಟುಂಬಗಳಿಗೆ ದನದ ಕೊಟ್ಟಿಗೆ, ಆಡು ಹಾಗೂ ಹಂದಿ ಸಾಕಾಣಿಕೆ, ಇಂಗು ಗುಂಡಿ, ಕ್ಷೇತ್ರ ಬದು ನಿರ್ಮಾಣ, ಕೃಷಿ ಭೂ ಸಮತಟ್ಟು, ಈರುಳ್ಳಿ ಶೇಖರಣಾ ಘಟಕ ಸೇರಿದಂತೆ ಹಲವು ಚಟುವಟಿಕೆ ಕೈಗೊಳ್ಳಲು ಅವಕಾಶವಿದ್ದು ರೈತರು ಹಾಗೂ ಗ್ರಾಮದ ಜನ ಸದುಪಯೋಗಕ್ಕೆ ಮುಂದಾಗಬೇಕು ಎಂದರು.
ತೋಟಗಾರಿಕೆ ಇಲಾಖೆಗೆ ಸಂಬಂದಪಟ್ಟ ಅಡಿಕೆ, ತೆಂಗು, ಗೇರು, ಎಡೆ ಸಸಿ, ಕೋಕೋ, ಕಾಳು ಮೆಣಸು, ವೀಳ್ಯದೆಲೆ, ಬಾಳೆ ಸೇರಿದಂತೆ ಹಲವು ಕೃಷಿ ಚಟುವಟಿಕೆಗೂ ಅವಕಾಶವಿದೆ. ಗ್ರಾಮ ನೈರ್ಮಲ್ಯ ಹಾಗೂ ಶುದ್ಧ ನೀರಿನ ಪೂರೈಕೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜನ ಮುಂಜಾಗ್ರತೆ ಕೈಗೊಳ್ಳಬೇಕು. ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು ಎಂದು ಹೇಳಿದರು.
ಐಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿಗೆ ನೀರು ಹರಿಯಲು ಜಾಗವಿಲ್ಲದ ಕಾರಣ ಅಲ್ಲಿಯೇ ನಿಂತು ರೋಗಕ್ಕೆ ಆಹ್ವಾನ ನೀಡುವಂತಿದೆ. ಗ್ರಾಪಂ ಎದುರಿನಲ್ಲಿನ ಚರಂಡಿಯಲ್ಲಿ ಕಸ ಹಾಗೂ ತ್ಯಾಜ್ಯ ಹಾಗೇ ಇದ್ದು ಶೀಘ್ರ ಸ್ವಚ್ಚಗೊಳಿಸಬೇಕು. ಶುದ್ಧ ಕುಡಿವ ನೀರು ಪೂರೈಸಬೇಕು. ವಾರಕ್ಕೊಮ್ಮೆ ಗಟಾರಗಳಿಗೆ ರಸಾಯನ ಸಿಂಪಡಿಸಬೇಕು. ಗ್ರಾಮದಲ್ಲಿ ಫಾಗಿಂಗ್ ನಡೆಸಬೇಕು. ಕುಡಿವ ನೀರಿನ ಮೂಲಗಳಾದ ಸಿಸ್ಟನ್‌ಗಳನ್ನು ೧೫ ದಿನಕ್ಕೊಮ್ಮೆ ಸ್ವಚ್ಚಗೊಳಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಪತ್ರವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಪಂ ಗಮನಕ್ಕೆ ತಂದರು.
ಗ್ರಾಪಂ ಮಾಜಿ ಸದಸ್ಯ ಶಿವಸಂಗಯ್ಯ ನಿಂಬಲಗುAದಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ತೆಗ್ಗಿ, ಮುರುಗೇಶ ಬುಗಟಿ, ಪರಶುರಾಮ ಗೋಡಿ, ಮಹಾಂತೇಶ ಹೊಸಮನಿ, ಪ್ರಕಾಶ ವಡ್ಡರ, ಗ್ರಾಪಂ ಸಿಬ್ಬಂದಿಗಳಾದ ಹನಮಂತ ಕುರಿ, ಶೇಖಣ್ಣ ಚಂದ್ರಗಿರಿ, ಚಂದ್ರಶೇಖರ ಚೌವಾಣ, ಶ್ರೀಕಾಂತ ದಾಸರ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಗ್ರಾಮಸಭೆಗೂ ಮುನ್ನ ಸೋಮವಾರದಂದು ಐಹೊಳೆ, ಕಳ್ಳಿಗುಡ್ಡ ಹಾಗೂ ನಿಂಬಲಗುAದಿ ಗ್ರಾಮಗಳಲ್ಲಿ ವಾರ್ಡ್ ಸಭೆ ಆಯೋಜಿಸಲಾಗಿತ್ತು.