ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಮೀಪಿಸುತ್ತಿರುವಂತೆ ಈ ಬಾರಿ ಗದ್ದುಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಬಿಜೆಪಿ ಪ್ರಯತ್ನ ಮುಂದುವರೆದಿದೆ.
ಇತ್ತೀಚೆಗೆ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಬೆಂಬಲಿಗರು ಅವಿರೋಧವಾಗಿ ಆಯ್ಕೆ ಆಗಿದ್ದರು. ಬಾಗಲಕೋಟೆ ಪಿಕೆಪಿಎಸ್ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಅಜಯಕುಮಾರ ಸರನಾಯಕ ಹಾಗೂ ಟಿಎಪಿಸಿಎಂಎಸ್ ಕ್ಷೇತ್ರದಿಂದ ನಂದಕುಮಾರ ಪಾಟೀಲ ಅವರ ಆಯ್ಕೆ ಅವಿರೋಧವಾಗಿ ನಡೆದಿತ್ತು.
ಉಳಿದ ೧೧ ಸ್ಥಾನಗಳಿಗೆ ನವೆಂಬರ್ ೫ ರಂದು ನಡೆದ ಮತದಾನದಲ್ಲಿ ಕಾಂಗ್ರೆಸ್ ಪರವಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಶಾಸಕ ಆನಂದ ನ್ಯಾಮಗೌಡ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಎಚ್.ವೈ.ಮೇಟಿ, ಬಿಜೆಪಿ ಪರವಾಗಿ ರಾಮಣ್ಣ ತಳೇವಾಡ, ಶಾಸಕ ಸಿದ್ದು ಸವದಿ, ಶಿವನಗೌಡ ಅಗಸಿಮುಂದಿನ, ಪ್ರಕಾಶ ತಪಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಕುಮಾರಗೌಡ ಜನಾಲಿ ಹಾಗೂ ಮುರುಗೇಶ ಕಡ್ಲಿಮಟ್ಟಿ ಬಂಡಾಯ ಅಭ್ಯರ್ಥಿಗಳಾಗಿ ನಿಂತು ನಿರ್ದೇಶಕರಾಗಿ ಆಯ್ಕೆ ಆಗಿದ್ದರು.
ಸದ್ಯ ಡಿಸಿಸಿ ಬ್ಯಾಂಕ್ ೧೩ ನಿರ್ದೇಶಕರ ಪೈಕಿ ಕಾಂಗ್ರೆಸ್‌ನ ೬ ಹಾಗೂ ಬಿಜೆಪಿಯ ೫ ಜನ ಬೆಂಬಲಿಗರು, ಹಾಗೂ ಇಬ್ಬರು ಬಂಡಾಯಗಾರರು ಆಯ್ಕೆ ಆಗಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷ ಸುಲಭವಾಗಿ ಡಿಸಿಸಿ ಬ್ಯಾಂಕ್ ಗದ್ದುಗೆ ಏರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ಬಾರಿ ಶತಾಯಗತಾಯ ಡಿಸಿಸಿ ಗದ್ದುಗೆ ತನ್ನತ್ತ ಪಡೆಯಲು ಬಿಜೆಪಿ ತನ್ನ ಪ್ರಯತ್ನ ಮುಂದುವರೆಸಿದೆ ಎಂಬ ಮಾತು ಕೇಳಿ ಬಂದಿದೆ.
ಇದಕ್ಕೆ ಪುಷ್ಠಿ ನೀಡುವಂತೆ ನಿರ್ದೇಶಕರ ಆಯ್ಕೆ ನಡೆದ ಮರುದಿನವೇ ಅಪೆಕ್ಸ್ ಬ್ಯಾಂಕ್‌ನಿAದ ಮಹಾಲಿಂಗಪುರ ಪಿಕೆಪಿಎಸ್ ಅಧ್ಯಕ್ಷ, ಬಿಜೆಪಿ ಮುಖಂಡ ಬಸವರಾಜ ಪಾಟೀಲ ಅವರನ್ನು ನಾಮನಿರ್ದೇಶನ ಮಾಡಿದ್ದು ಅಲ್ಲಿಗೆ ಬಿಜೆಪಿ ಬಲ ೬ಕ್ಕೇರಿತು. ಆದರೆ ರೆಬಲ್‌ಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮುರುಗೇಶ ಕಡ್ಲಿಮಟ್ಟಿ ಹಾಗೂ ಕುಮಾರಗೌಡ ಜನಾಲಿ ಇಬ್ಬರು ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ ಎಂಬ ಮಾತು ಹರಿದಾಡುತ್ತಲೇ ಎಚ್ಚರಗೊಂಡ ಬಿಜೆಪಿ ದಿಡೀರ್ ಬೆಳವಣಿಗೆಯಲ್ಲಿ ಮತ್ತೊಬ್ಬ ಬಿಜೆಪಿಯ ಸಹಕಾರಿ ಧುರೀಣ ಸಿದ್ದನಗೌಡ ಪಾಟೀಲ ಅವರನ್ನು ರಾಜ್ಯ ಸರಕಾರದಿಂದ ಡಿಸಿಸಿ ಬ್ಯಾಂಕ್‌ಗೆ ಬುಧವಾರ ನಾಮನಿರ್ದೇಶನ ಮಾಡಿಸುವಲ್ಲಿ ಯಶಸ್ವಿಯಾಗಿದೆ.
ಸದ್ಯಕ್ಕೆ ಬಿಜೆಪಿ ಬೆಂಬಲಿಗರ ಬಲ ೭ಕ್ಕೇರಿದ್ದು ಕಾಂಗ್ರೆಸ್ ೬ ಹಾಗೂ ಇಬ್ಬರು ರೆಬಲ್‌ಗಳಿದ್ದಾರೆ. ರೆಬಲ್‌ಗಳಲ್ಲಿ ಒಬ್ಬರನ್ನು ಬ್ಯಾಂಕ್‌ನ ಉಪಾಧ್ಯಕ್ಷ ಸ್ಥಾನಕ್ಕೆ ಸೆಳೆಯುವ ಮೂಲಕ ಡಿಸಿಸಿ ಬ್ಯಾಂಕ್ ಆಡಳಿತವನ್ನು ತಮ್ಮತ್ತ ವಾಲಿಸಬೇಕು ಎಂಬ ರಣತಂತ್ರ ಹೊಂದಿದೆ ಎನ್ನಲಾಗಿದೆ. ಆದರೆ ರೆಬಲ್‌ಗಳಿಬ್ಬರೂ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ ಎಂಬ ಮಾತು ಮೊಗಸಾಲೆಯಲ್ಲಿ ಕೇಳಿದ್ದು ಹಾಗೇನಾದರೂ ಆದರೆ ಮತ್ತೆ ಬಿಡಿಸಿಸಿ ಚುಕ್ಕಾಣೆ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಲಿದೆ ಎನ್ನಲಾಗಿದೆ.
ಎರಡೂ ಪಕ್ಷಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಕೋರಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ ಅಜಯಕುಮಾರ ಸರನಾಯಕ ಅವರು ಅಧ್ಯಕ್ಷರಾಗುವುದಾದರೆ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಕುಮಾರಗೌಡ ಜನಾಲಿ ತಿಳಿಸಿದ್ದರೆ, ಎಸ್.ಆರ್.ಪಾಟೀಲರು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸುವುದಾಗಿ ಮುರುಗೇಶ ಕಡ್ಲಿಮಟ್ಟಿ ತಿಳಿಸಿದ್ದಾರೆನ್ನಲಾಗಿದೆ.
ಚುನಾವಣೆಗೆ ನಾಲ್ಕು ದಿನ ಮಾತ್ರ ಬಾಕಿ ಇದ್ದು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ಬುಧವಾರ ಹೊಸ ನಾಮನಿರ್ದೇಶನದಿಂದ ಬಿಜೆಪಿ ವಲಯದಲ್ಲಿ ಹೊಸ ಚಿಂತನೆ ಮೂಡಿದಂತಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿರುವುದರಿಂದ ಜಿಲ್ಲೆಯ ಸಹಕಾರ ವಲಯದ ಹಿರಿಯಣ್ಣನಂತೆ ಇರುವ ಡಿಸಿಸಿ ಬ್ಯಾಂಕ್‌ನ ಆಡಳಿತ ಕೈಯತ್ತ ಹೋಗಬಾರದೆಂದು ಬಿಜೆಪಿಯಲ್ಲಿ ಪ್ರಯತ್ನಗಳು ಮುಂದುವರೆದಿವೆ ಎಂಬ ಮಾತು ಕೇಳಿ ಬಂದಿದೆ.