ನಿಮ್ಮ ಸುದ್ದಿ ಬಾಗಲಕೋಟೆ
ಪಕ್ಷ ನಿಷ್ಠೆಯನ್ನೇ ಉಸಿರಾಗಿಸಿಕೊಂಡು ಮುನ್ನಡೆಯುತ್ತಿರುವ ಸರಳ, ಸಜ್ಜನಿಕೆಯ ರಾಜಕಾರಣಿ, ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಗುಡೂರ ಬಿಜೆಪಿ ಮುಖಂಡರು ಸಿಎಂ ಅವರನ್ನು ಒತ್ತಾಯಿಸಿದ್ದಾರೆ.
ಹಿಂದಿನಿಂದಲೂ ಹುನಗುಂದ ಮತಕ್ಷೇತ್ರ ಮಲತಾಯಿ ಧೋರಣೆಗೆ ಒಳಗಾಗುತ್ತಿದೆ. ೧೯೮೩ ರಿಂದ ೧೯೮೯ರ ವರೆಗೆ ಶಾಸಕರಾಗಿದ್ದ ಎಸ್.ಎಸ್.ಕಡಪಟ್ಟಿಯವರಿಗೆ ಸಚಿವ ಸ್ಥಾನ ದೊರೆಯಲಿಲ್ಲ. ಡಾ.ಎಂ.ಪಿ.ನಾಡಗೌಡರೂ ಸಚಿವ ಸ್ಥಾನದಿಂದ ವಂಚಿತರಾದರು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ೩ ಬಾರಿ ಶಾಸಕರಾಗಿದ್ದ ಎಸ್.ಆರ್.ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ದೊರೆತರೂ ಅದು ೨ ವರ್ಷಕ್ಕೆ ಮಾತ್ರ ಸೀಮಿತವಾಯಿತು.
ಸದ್ಯ ಶಾಸಕರಾಗಿರುವ ದೊಡ್ಡನಗೌಡ ಪಾಟೀಲರು ೩ ಬಾರಿ ಶಾಸಕರಾಗಿದ್ದು ಹಿರಿಯರು ಹಾಗೂ ಅನುಭವಸ್ಥರಾಗಿದ್ದಾರೆ. ೨೦೦೪ರಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಹುನಗುಂದ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ. ಪಕ್ಷ ನಿಷ್ಠೆಯೇ ತಮ್ಮ ಉಸಿರಾಗಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಶೀಘ್ರ ವಿಸ್ತರಣೆಯಾಗಲಿರುವ ಸಚಿವ ಸಂಪುಟದಲ್ಲಿ ದೊಡ್ಡನಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿ ಮುಖಂಡರಾದ ಮುತ್ತಣ್ಣ ಹುರಕಡ್ಲಿ, ರಾಜು ದಾನಿ, ಗಣಪತಿ ಬಸವಾ, ಯಮನೂರ ನೆಲಗಿ, ಚಂದ್ರಶೇಖರ ಬೆಳಗಲ್ ಇತರರು ಹೈಕಮಾಂಡ್‌ನ್ನು ಒತ್ತಾಯಿಸಿದ್ದಾರೆ.
ದೊಡ್ಡನಗೌಡ ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಒತ್ತಾಯಿಸಿ ಶೀಘ್ರದಲ್ಲೇ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರೊಂದಿಗೆ ಚರ್ಚೆಗೆ ತೆರಳಿ ಹೈಕಮಾಂಡ್ ಗಮನಕ್ಕೂ ತರಲು ನಿರ್ಧರಿಸಲಾಗಿದೆ ಎಂದು ಮುತ್ತಣ್ಣ ಹುರಕಡ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.