ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ನಡೆದ ಹಗರಣವನ್ನು ಒಂದೊಂದಾಗಿ ಹೊರಹಾಕುತ್ತೇನೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಂದಲೇ ನನಗೆ ಅನ್ಯಾಯವಾಗಿದೆ ಎಂದು ಬಹಿರಂಗವಾಗಿ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರ ವಿರುದ್ಧ ಹರಿಹಾಯ್ದರು.
ಅಜಯಕುಮಾರ ಸರನಾಯಕ ಹಾಗೂ ಎಸ್.ಆರ್.ಪಾಟೀಲ ತಮಗೆ ಬಿಡಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದರೂ ಮೋಸ ಮಾಡಿ ತಮಗೆ ಅಧ್ಯಕ್ಷ ಸ್ಥಾನ ದೊರಕುವಂತೆ ವ್ಯವಸ್ಥೆ ಮಾಡಿಕೊಂಡರು. ನನಗೂ ರಾಜಕೀಯ ಮಾಡಲು ಗೊತ್ತಿದೆ. ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ರಾಜಕೀಯ ಚಿತ್ರಣ ಬದಲಾಗುವುದು ನಿಶ್ಚಿತ ಎಂದು ತಮ್ಮದೆ ಪಕ್ಷದ ನಾಯಕರ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ನನ್ನನ್ನು ಯಾರೂ ಕರೆದಿಲ್ಲ. ಹೀಗಾಗಿ ನಾನು ಚುನಾವಣೆಯ ಸಮಯದಲ್ಲಿ ಹೋಗುವ ಅವಶ್ಯಕತೆ ಬರಲಿಲ್ಲ. ಮತದಾನಕ್ಕೆ ನನ್ನನ್ನು ವಿನಂತಿಸಲಾಯಿತು ಎಂಬ ಅಜಯಕುಮಾರ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಒಂದು ವೇಳೆ ಹೇಳಿದ್ದು ಸರಿಯಾಗಿದೆ ಎಂದು ಅವರಿಗನ್ನಿಸಿದರೆ ಅಜಯಕುಮಾರ ಸರನಾಯಕ, ಎಸ್.ಆರ್.ಪಾಟೀಲ, ಎಸ್.ಜಿ.ನಂಜಯ್ಯನಮಠ ಕೂಡಲಸಂಗಮಕ್ಕೆ ಬಂದು ಸಂಗಮನಾಥನ ಮೇಲೆ ಪ್ರಮಾಣ ಮಾಡಲಿ. ನಾನೂ ಬರುತ್ತೇನೆ ಎಂದರು.
ಈ ಹಿಂದೆ ಶಾಸಕನಾಗಿ ಕೆಲಸ ನಿರ್ವಹಿಸುತ್ತಿದ್ದು ಬಿಡಿಸಿಸಿ ನಿರ್ದೇಶಕನಾದರೂ ಅಷ್ಟೊಂದು ತಲೆ ಹಾಕಿರಲಿಲ್ಲ. ಇದೀಗ ಸಹಕಾರಿ ರಂಗದಲ್ಲಿ ರಾಜಕೀಯವಿಲ್ಲ ಎಂದು ಸರನಾಯಕ, ಎಸ್.ಆರ್.ಪಾಟೀಲ ತಿಳಿಸಿದ್ದು ಯಾರೇ ನಿರ್ದೇಶಕರು ನನ್ನೊಂದಿಗೆ ಬರದಿದ್ದರೂ ಮುಂದಿನ ದಿನದಲ್ಲಿ ಅಲ್ಲಿನ ಹಗರಣಗಳನ್ನೆಲ್ಲ ಹೊರಹಾಕುತ್ತೇನೆ. ಅದನ್ನು ಅಗತ್ಯ ದಾಖಲೆ ಸಮೇತ ಬಿಡುಗಡೆಗೊಳಿಸುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್ನಲ್ಲಿ ಅಡ್ಡ ಮತದಾನ ಮಾಡಿದವರು ಯಾರು ಎನ್ನುವುದು ಬಹಿರಂಗ ಸತ್ಯ. ನಾನೇನು ಹೆಚ್ಚು ಹೇಳಬೇಕಿಲ್ಲ. ರಾಮಣ್ಣ ತಳೇವಾಡ, ಶಿವನಗೌಡ ಅಗಸಿಮುಂದಿನ ಅವರೇ ಅಡ್ಡ ಮತದಾನ ಮಾಡಿದ್ದಾರೆ. ಸಮುದಾಯ ಪರಿಗಣಿಸಿ ಅಜಯಕುಮಾರ ಗೆದ್ದಂತೆ ನನ್ನೊಂದಿಗೂ ನನ್ನ ಸಮುದಾಯವಿದೆ. ಮುಂದಿನ ಹಂತದಲ್ಲಿ ಏನಾಗಲಿದೆ ಎಂಬುದನ್ನು ತೋರಿಸುತ್ತೇನೆ ಎಂದು ಹೇಳಿದರು.
ಈ ಹಿಂದೆಯೇ ನನಗೆ ಬಿಡಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾಗಿ ತಿಳಿಸಿದ್ದರು. ೫ ವರ್ಷ ಕಳೆದರೂ ಅಧ್ಯಕ್ಷ ಸ್ಥಾನಕ್ಕೆ ಅಂಟಿಕೊಂಡು ಕುಳಿತರು. ಈ ಬಾರಿಯಾದರೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ವಿನಂತಿಸಿದೆ. ಅದನ್ನು ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೆ. ಆದರೆ ಸ್ವಾರ್ಥ ಹಾಗೂ ಹತಾಶ ರಾಜಕಾರಣದಿಂದಾಗಿ ಅಧಿಕಾರ ನೀಡಲಿಲ್ಲ ಎಂದು ಹೇಳಿದರು.