ನಿಮ್ಮ ಸುದ್ದಿ ಬಾಗಲಕೋಟೆ
ಸಕಾಲ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರ ಈ ವರ್ಷ ಸಕಾಲ ಸಪ್ತಾಹ ಜಾರಿಗೊಳಿಸಿದೆ ಎಂದು ಹುನಗುಂದ ತಾಲೂಕು ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ತಿಳಿಸಿದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಕಾಲ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಸಕಾಲ ಸಪ್ತಾಹದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಕಾಲ ಯೋಜನೆಯಡಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ನಿಗದಿತ ವೇಳೆಯಲ್ಲಿ ವಿಲೇವಾರಿ ಆಗಬೇಕು ಎಂಬುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ, ಜನನ-ಮರಣ, ಉದ್ಯಮಿ ಪರವಾನಿಗೆ, ಖಾತೆ ಬದಲಾವಣೆ, ನೋಂದಣಿ ಸೇರಿದಂತೆ ೧೨ ಸೇವೆಗಳು ಸಕಾಲ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಹೇಳಿದರು.
ಸಮುದಾಯ ಸಂಘಟನಾ ಅಧಿಕಾರಿ ಯು.ಜಿ.ವರದಪ್ಪನವರ, ಜೆಎಚ್‌ಐ ಸಂತೋಷ ವ್ಯಾಪಾರಿಮಠ, ಜೆಇ ವಿ.ಎಸ್.ಚವಡಿ, ಪೌರ ಸೇವಾ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕನಕಪ್ಪ ಮರ್ಜಿ, ಪಪಂ ಅಧ್ಯಕ್ಷ ಸಂಗಪ್ಪ ತಳವಾರ, ಸದಸ್ಯರಾದ ವಿಜಯಕುಮಾರ ಕನ್ನೂರ, ಸಂಗಮೇಶ ಗೌಡರ, ಗುರುನಾಥ ಚಳ್ಳಮರದ, ಮಲ್ಲಪ್ಪ ಬಂಡಿವಡ್ಡರ, ರಾಮಣ್ಣ ಬ್ಯಾಕೋಡ ಇತರರು ಇದ್ದರು.