ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ಅತೀ ಹಿಂದುಳಿದಿರುವ ನದಾಫ/ಪಿಂಜಾರ ಜನಾಂಗದ ಅಭಿವೃದ್ಧಿಗಾಗಿ ಸರಕಾರ ನದಾಫ/ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಸಮಾಜದ ಮುಖಂಡರಾದ ಎಂ.ಎಂ.ಚಿತ್ತರಗಿ, ಜಿಲ್ಲಾಧ್ಯಕ್ಷರಾದ ಎಸ್.ಎಚ್.ಮುದಕವಿ, ವಿಭಾಗೀಯ ಉಪಾಧ್ಯಕ್ಷರಾದ ಪಿ.ಇಮಾಮಸಾಹೇಬ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನದಾಫ/ಪಿಂಜಾರ ಜನಾಂಗವು ೨೦೦೦ ನೇ ಇಸ್ವಿಯಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಂಡು ಕೆಟೆಗರಿ -೧ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದೆ. ಆದರೆ ಜನಾಂಗದ ಅಭಿವೃದ್ಧಿಗಾಗಿ ಸರಕಾರ ಯಾವುದೇ ರೀತಿಯ ವಿಶೇಷ ಸೌಲಭ್ಯ ಅನುದಾನ ಪ್ಯಾಕೇಜ್ ಘೋಷಣೆ ಮಾಡದೇ ಸತಾಯಿಸುತ್ತಿದೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗ ಆಯೋಗದ ಸದಸ್ಯರಾದ ಡಾ.ಸಿ.ಎಸ್.ದ್ವಾರಕನಾಥ ಅವರು ತಮ್ಮ ವರದಿಯಲ್ಲಿ ಪ್ರವರ್ಗ -೧ ರಲ್ಲಿರುವ ನದಾಫ/ಪಿಂಜಾರ ಸಮಾಜವು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದರಷ್ಟೇ ಅತೀ ಹಿಂದುಳಿದ ಜಾತಿಯಾಗಿದ್ದು, ಈ ವರ್ಗದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಪ್ರಕಟಿಸಲು ವರದಿ ನೀಡಿದ್ದಾರೆ. ಕಳೆದ ೧೦ ವರ್ಷಗಳಿಂದ ನಾವು ಅಭಿವೃದ್ಧಿ ನಿಗಮಕ್ಕಾಗಿಒತ್ತಾಯಿಸುತ್ತಿದ್ದರು ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ನದಾಫ/ಪಿಂಜಾರ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ರಾಜ್ಯಾಧ್ಯಂತ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಡಿ.೧ ರಂದು ತಹಶೀಲ್ದಾರ, ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸರಿ ಸುಮಾರು ೩೫ ಲಕ್ಷ ಜನಸಂಖ್ಯೆ ಹೊಂದಿರುವ ನದಾಫ/ಪಿಂಜಾರ ಸಮುದಾಯ ಅಲೇಮಾರಿ ಜನಾಂಗವಾಗಿದ್ದು, ಊರು ಊರು ತಿರುಗಿ ಗಾದಿ ಹಾಕುವ ಕೆಲಸ ಮಾಡುತ್ತಿದ್ದಾರೆ, ಕೆಲವರು ಹಗ್ಗ, ಕನ್ನಿ ಮೂಗದಾನ, ಹಾಸಿಗೆ ದಿಂಬು ತಯಾರಿಸುವ ಕೆಲಸ ಮಾಡುತಿದ್ದು ಊರು ಗೌಡರ ಮನೆಗಳಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದು ಅತೀ ಕಷ್ಟದ ಬದುಕು ಸಾಗಿಸುತ್ತಿದ್ದು, ಬದಲಾದ ತಾಂತ್ರಿಕ ಯುಗದಲ್ಲಿ ಕೆಲಸ ಕಳೆದುಕೊಂಡು ರೈತ ಕಾರ್ಮಿಕರಾಗಿ ಸೈಕಲ್ ಶಾಪ್, ಹೂ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ನಾವು ಧರ್ಮದಿಂದ ಮುಸ್ಲಿಂ ರಾಗಿದ್ದರು ಕೂಡ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಮುಸ್ಲಿಂ ಸಮುದಾಯದವರು ತೆಗೆದುಕೊಳ್ಳುವುದಿಲ್ಲ ನಾವು ನಮ್ಮ ಸಮಾಜದಲ್ಲಿ ಮದುವೆ ಮುಂಜಿ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬೇಕಾಗಿದ್ದು, ಮುಸ್ಲಿಂ ಸಮುದಾಯದ ಇತರೆ ಜನಾಂಗದವರು ಸಹ ನಮ್ಮನ್ನು ಕೀಳಾಗಿ ಕಾಣುತ್ತಿರುವುದು ಸಮಾಜದಲ್ಲಿ ಕಂಡು ಬರುತ್ತಿದೆ ಎಂದರು.
ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಮಾಜದ ರಾಜ್ಯಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಎರಡು ಬಾರಿ ಮನವಿ ಸಲ್ಲಿಸಿದ್ದು, ಆದರೂ ಸಹ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿಗಳು ಮನಸ್ಸು ಮಾಡಿಲ್ಲ. ಆದಷ್ಟು ಬೇಗ ಸಮುದಾಯದ ಹಿತಕ್ಕಾಗಿ ಅಭಿವೃದ್ಧಿಗಾಗಿ ನದಾಫ/ಪಿಂಜಾರ ನಿಗಮ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನದಾಫ/ಪಿಂಜಾರ ಸಮಾಜದ ಸಂಘಟನಾ ಕಾರ್ಯದರ್ಶಿ ಅನಗವಾಡಿ ನಭಿ ನದಾಫ, ಮಹಿಳಾ ಜಿಲ್ಲಾಧ್ಯಕ್ಷೆ ರಿಯಾನಾ ಎಲ್.ನದಾಫ, ಲಾಲಸಾಬ ನದಾಫ, ಸಾದಿಕ ಕೋಲಾರ, ಮಕ್ತುಮ ಹುಸೇನಿ ಉಪಸ್ಥಿತರಿದ್ದರು.