ನಿಮ್ಮ ಸುದ್ದಿ ವಿಜಯಪುರ
ಜೆಡಿಎಸ್ ಶಾಸಕ, ಮಾಜಿ ಸಚಿವ ಎಂ.ಸಿ.ಮನಗೂಳಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಜೆಡಿಎಸ್ ಶಾಸಕರಾಗಿದ್ದ ಅವರು ಈ ಹಿಂದೆ ಜೆ.ಎಚ್.ಪಟೇಲ್ ಹಾಗೂ ಕುಮಾರಸ್ವಾಮಿ ಸರಕಾರದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜ.9ರಂದು ಏರ್ ಲಿಫ್ಟ್ ಮೂಲಕ ಕಲಬುರಗಿ ವಿಮಾನ ನಿಲ್ದಾಣದಿಂದ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ನಿಧನರಾದರು.
ಅವರಿಗೆ ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.
6 ಬಾರಿ ಸ್ಪರ್ಧಿಸಿ 2 ಬಾರಿ ಶಾಸಕರಾಗಿರುವ ಮನಗೂಳಿ ಅವರು ತಮ್ಮ ಕೊನೆಯಾಸೆ ಈಡೇರಿಸಿಕೊಂಡಿದ್ದು ಶಾಸಕರಾಗಿಯೇ ಕೊನೆಯುಸಿರೆಳೆದರು.
2018 ರ ವಿಧಾನಸಭೆ ಚುನಾವಣೆಯಲ್ಲಿ
ಇದೇ ನನ್ನ ಕೊನೆ ಚುನಾವಣೆ ಎಂದಿದ್ದ ಮನಗೂಳಿ ಅಧಿಕಾರವಧಿಯಲ್ಲೇ ಕೊನೆಯುಸಿರೆಳೆದರು.
1994 ಹಾಗೂ 2018 ರ ವಿಧಾನಸಭೆ ಚುನಾವಣೆಯಲ್ಲಿ ವಿಜೇತರಾದ ಮನಗೂಳಿ ಅವರು ಗೆದ್ದಾಗೊಮ್ಮೆ ಮಂತ್ರಿಪಟ್ಟ ಫಿಕ್ಸ್ ಎನ್ನುತ್ತಿದ್ದರು. ಮೊದಲ ಬಾರಿ ಶಾಸಕರಾದಾಗ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಎರಡನೇ ಬಾರಿ ತೋಟಗಾರಿಕೆ ಮಂತ್ರಿಯಾಗಿದ್ದರು.
ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ ವಿರುದ್ದ 2018 ರ ವಿಧಾನ ಸಭೆ ಚುನಾವಣೆಯಲ್ಲಿ 9305 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಭಾಗ್ಯವೂ ಒಲಿದು ಬಂತು.
ತೋಟಗಾರಿಕೆ ಇಲಾಖೆ ಸಚಿವರಾಗಿದ್ದ ಮನಗೂಳಿ ಜಿಲ್ಲೆಗೆ ತೋಟಗಾರಿಕೆ ಕಾಲೇಜ್ ಕೊಡಿಸುವಲ್ಲಿ ಸಫಲರಾಗಿದ್ದರು. ಅಲ್ಲದೇ ಸದರಿ ಕಾಲೇಜ್ ತಮ್ಮ ಕ್ಷೇತ್ರದ ಆಲಮೇಲದಲ್ಲಿಯೇ ಆಗಬೇಕೆಂಬ ಕನಸು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು.
ಗುತ್ತಿಬಸವಣ್ಣ ಏತನೀರಾವರಿ ಯೋಜನೆ ಹರಿಕಾರ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಾಗಿ ಎಂ.ಸಿ.ಮನಗೂಳಿ ಸಾಕಷ್ಟು ಶ್ರಮ ವಹಿಸಿದ್ದರು. ಅವರ ಹೋರಾಟದ ಫಲವಾಗಿ ಯೋಜನೆ ಜಾರಿಯಾಗಿತ್ತು.
*ದೇವೇಗೌಡರ ಆಪ್ತ*
ಮಾಜಿ ಪ್ರಧಾನಿ ದೇವೆಗೌಡರ ಮಾನಸ ಪುತ್ರ ಎಂದೇ ಖ್ಯಾತರಾಗಿದ್ದ ಎಂ.ಸಿ.ಮನಗೂಳಿ ಗೋಲಗೇರಿಯಲ್ಲಿ ತಮ್ಮ ಹಾಗೂ ದೇವೇಗೌಡರ ಪ್ರತಿಮೆ ಸ್ಥಾಪಿಸಿದ್ದರು. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಸಾಕಾರದ ಫಲವಾಗಿ ಕಂಚಿನ ನಿರ್ಮಿಸಿದ ಕಂಚಿನ ಪುತ್ಥಳಿಗೆ ಈಚೆಗಷ್ಟೇ ಬೆಂಕಿ ಹಚ್ಚಿ ಕೆಲವರು ರಾಜಕೀಯ ಹಗೆತನ ಸಾಧಿಸಲು ಮುಂದಾಗಿದ್ದರು. ಅದಕ್ಕಾಗಿ ಮನಗೂಳಿ ಮುತ್ಯಾ ಬೇಸರ ಸಹ ವ್ಯಕ್ತಪಡಿಸಿದ್ದರು.
ಜೀವ ಇರೋವರೆಗೂ ಜೆಡಿಎಸ್ ತ್ಯಜಿಸಲ್ಲ ಎನ್ನುತ್ತಿದ್ದ ಮನಗೂಳಿ ಮುತ್ಯಾ ಜಿಲ್ಲಾಧ್ಯಕ್ಷರಾಗಿ ಸುದೀರ್ಘಾವಧಿ ಪಕ್ಷ ಮುನ್ನಡೆಸಿದರು.
ಶಾಸಕರಾದ ಬಳಿಕ ಆ ಹುದ್ದೆಗೆ ತಾವೇ ಮುಂದೆ ನಿಂತು ಬೇರೆಯವರಿಗೆ ಅವಕಾಶ ಕಲ್ಪಿಸಿದರು. ಜೆಡಿಎಸ್ ಗೆ ಭದ್ರ ಬುನಾದಿ ಹಾಕಿದ್ದಲ್ಲದೇ ಕೊನೆ ಉಸಿರು ಇರುವವರೆಗೂ ಜೆಡಿಎಸ್ ಬಿಡದ ಪಕ್ಷ ನಿಷ್ಠ ಎಂಬ ಹೆಗ್ಗಳಿಕೆ ಹೊತ್ತರು. ಸಧ್ಯ ಅವರನ್ನು ಕೆಳೆದುಕೊಂಡು ಜೆಡಿಎಸ್ ಬಡವಾಗಿದ್ದು ಅವರ ಅಂತಿಮ ದರ್ಶನಕ್ಕಾಗಿ ಸಿಂದಗಿಯಲ್ಲಿ ಅವರದ್ದೇ ಶಿಕ್ಷಣ ಸಂಸ್ಥೆಯಲ್ಲಿ ಸಿದ್ದತೆ ಕಲ್ಪಿಸಲಾಗುತ್ತಿದೆ.