ಜನರ ಹಿತ ಕಾಪಾಡುವಲ್ಲಿ ಬಿಜೆಪಿ ವಿಫಲ
ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯ ಸರಕಾರ ಅಕ್ಷರ ದಾಸೋಹ ಯೋಜನೆಯಲ್ಲಿ ಕಳೆದ ೭ ತಿಂಗಳಿನಿಂದ ಆಹಾರ ನೀಡದ ಕಾರಣ ಮಕ್ಕಳು ಹಸಿವಿನಿಂದ ಬಳಲುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಆಹಾರ ಧಾನ್ಯ ನೀಡದ ಕಾರಣ ಬಡವರ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವೂ ದೊರೆಯುತ್ತಿಲ್ಲ ಎಂದು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಇಂತಹ ವಿಚಾರಗಳ ಕುರಿತು ಮಾತನಾಡಲು ಅವಕಾಶ ನೀಡುತ್ತಿಲ್ಲ. ಜನರ ಸಮಸ್ಯೆ ಪರಿಹರಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಆಸಕ್ತಿ ಇದ್ದಂತಿಲ್ಲ. ಬಿಜೆಪಿ ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಗೋ ಹತ್ಯೆ ನಿಷೇದ ಕಾನೂನು ತಂದದ್ದು ಸ್ವಾಗತವೇ ಸರಿ. ಆದರೆ ಅದರ ರಕ್ಷಣೆ, ಆಹಾರ ಪೂರೈಕೆ ಕುರಿತು ಸರಿಯಾದ ಮಾಹಿತಿಯಿಲ್ಲ. ಮಕ್ಕಳಿಗೆ ಆಹಾರ ನೀಡದ ಬಿಜೆಪಿ ಸರಕಾರ ಗೋವುಗಳಿಗೆ ಎಲ್ಲಿಂದ ಆಹಾರ ತರುತ್ತದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದ್ದು ಇದು ಕೂಡಲೆ ನಿಲ್ಲಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದ ಅಪಾಯ ಸಂಭವಿಸಲಿದೆ. ಕೇಂದ್ರದ ಕಾನೂನುಗಳನ್ನು ವಿರೋಸಿ ಪ್ರತಿಭಟನೆ ನಡೆಯುತ್ತಿದ್ದು ದೇಶವೇ ಹೊತ್ತಿ ಉರಿಯುತ್ತಿದೆ. ತೈಲ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಬಗ್ಗೆ ಸರಕಾರ ಕಿಂಚಿತ್ತೂ ಗಮನಿಸುತ್ತಿಲ್ಲ. ತಮ್ಮ ಸ್ವಯಂ ಸೇವೆಯಲ್ಲೇ ತೊಡಗಿದ್ದಾರೆ ಎಂದು ದೂರಿದರು.
ಜಿಎಸ್‌ಟಿ ಪಾಲು ರಾಜ್ಯಕ್ಕೆ ಬಾರದಿರುವ ಕುರಿತು ಇಲ್ಲಿನ ಸಂಸದರು, ಸಿಎಂ ಸೇರಿದಂತೆ ಎಲ್ಲರೂ ಕೇಂದ್ರವನ್ನು ಕೇಳುವ ಹಕ್ಕು ಕಳೆದುಕೊಂಡಿದ್ದಾರೆ. ಕೇಂದ್ರ ಸರಕಾರದ ಓಲೈಕೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದು ಜನಪರ, ರೈತಪರ ಸರಕಾರವಲ್ಲ, ಬದಲಾಗಿ ಅಂಬಾನಿ, ಅದಾನಿಗಳ ಸರಕಾರವಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಸರಕಾರದ ಪರಿಸ್ಥಿತಿ ಇದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ವಕ್ತಾರ ನಾಗರಾಜ ಹದ್ಲಿ, ಕಾಶೀನಾಥ ಹುಡೇದ, ಲೋಕಣ್ಣ ಕೊಪ್ಪದ, ದಾನೇಶ ತಡಸನೂರ ಇತರರು ಇದ್ದರು.