ನಿಮ್ಮ ಸುದ್ದಿ ಬಾಗಲಕೋಟೆ
ಮುಂದಿನ ಜನಾಂಗ, ಜೀವರಾಶಿಗಳು ಬದುವಂತಾಗಬೇಕಾದರೆ ಅವಶ್ಯಕತೆಗೆ ತಕ್ಕಂತೆ ನೀರನ್ನು ಬಳಕೆ ಮಾಡಿ ಸಂರಕ್ಷಿಸುವ ಕೆಲಸವಾಗಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ತೋವಿವಿಯ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ, ಅಟಲ್ ಭೂಜಲ ಯೋಜನೆ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಮಿತವ್ಯಯ ಬಳಕೆ ಮತ್ತು ಅಂತರ್ಜಲ ಜನಜಾಗೃತಿ ಅಭಿಯಾನ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ಅತಿಯಾದ ಆಶೆಯಿಂದ ಕೆರೆ, ಹಳ್ಳಗಳ ಒತ್ತುವರಿಯಿಂದ ಮಳೆಯ ನೀರು ಸಂಗ್ರಹವಾಗದೇ ವಿಫಲವಾಗುತ್ತಿರುವದರಿಂದ ಅಂತರ್ಜಲ ಕುಸಿಯುತ್ತಿದೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಪ್ರತಿ ವರ್ಷ ಸರಾಸರಿ ಮಳೆಯಿಂದ ಭೂಮಿಯಲ್ಲಿ ಸಂಗ್ರಹವಾದ ಜಲದಿಂದ ಶೇ.೮೦ ರಷ್ಟು ಉಪಯೋಗ ಮಾಡಿದರೆ ಸುರಕ್ಷಿತವಾಗುತ್ತದೆ. ಆದರೆ ಅದಕ್ಕಿಂದ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಹಿಂದೆ ಪೂರ್ವಜರು ಮಳೆಯ ನೀರನ್ನು ಹೋಗಲು ಬಿಡುತ್ತಿರಲಿಲ್ಲ. ಆದರೆ ಈಗ ನೀರು ಸಂಗ್ರಹಿಸುವ ಕೆಲಸವಾಗುತ್ತಿಲ್ಲವೆಂದರು.
ಭೂಮಿಯ ಮೇಲೆ ಬಿದ್ದಂತ ನೀರನ್ನು ಇಂಗಿಸುವ ಕೆಲಸ ಪ್ರತಿಯೊಬ್ಬರು ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯವಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗಾಗಿ ಬೆಳ್ಳಿ, ಬಂಗಾರವನ್ನು ಕೂಡಿಡುವುದು ಮುಖ್ಯವಲ್ಲ ಅವರ ಮುಂದಿನ ಜನಾಂಗ ಬದುಕಿಸಲು ನೀರು ಮುಖ್ಯವಾಗಿದ್ದು, ಅದಕ್ಕು ಸಂರಕ್ಷಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಟಲ್ ಭೂಜಲ ಯೋಜನೆ ಜಾರಿಗೆ ತಂದಿದ್ದು, ಅದನ್ನು ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಜಿಲ್ಲೆಯಲ್ಲಿ ಒಣ ಪ್ರದೇಶ ಭೂಮಿಯ ಬಗ್ಗೆ ಸರ್ವೇ ಮಾಡಿದ್ದು, ಕೆರೆ, ಬಾಂದಾರಗಳನ್ನು ಕಟ್ಟಲಿಕ್ಕೆ ಸಾಕಷ್ಟು ಭೂಮಿ ಇದೆ. ಅವುಗಳ ಅನುಷ್ಠಾನಕ್ಕೆ ಸಣ್ಣ ನೀರಾವರಿ ಸಚಿವರಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿಕೊಂಡರು.
ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಅಂತರ್ಜಲ ಕುಸಿತದಿಂದ ಭೂಮಿ ಬರಡಾಗುತ್ತಿರುವುದನ್ನು ಮನಗಂಡು ಕೇಂದ್ರ ಸರಕಾರ ಅಟಲ್ ಭೂಜಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಅಂತರ್ಜಲ ಹೆಚ್ಚಿಸುವ ಮೂಲಕ ಮುಂದಿನ ಜನಾಂಗಕ್ಕೆ ಅನುಕೂಲವಾಗುವಂತೆ ಮಾಡಬೇಕು. ಕೆರೆಗಳನ್ನು ತುಂಬಿಸುವದು, ನೀರಿನ ಸದ್ಬಳಕೆ, ನೀರಿನ ಮರುಪೂರಣ ಮಾಡುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಮುಖ್ಯವಾಗಿ ಹರಿವ ನೀರನ್ನು ನಿಲ್ಲಿಸಬೇಕು. ನಿಲ್ಲಿಸಿದ ನೀರನ್ನು ಭೂಮಿಯಲ್ಲಿ ಇಂಗಿಸಬೇಕು. ನೀರನ್ನು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಕೆ ಮಾಡಿ ನೀರನ್ನು ಅಪವ್ಯಯವಾಗಬಾರದೆಂದು ತಿಳಿಸಿದರು. ಭೂಮಿಯ ಮೇಲೆ ಬಿದ್ದಂತ ನೀರು ಆವಿಯಾಗುವದನ್ನು ಕಡಿಮೆಮಾಡಿ ವಾತಾವರಣ ತಂಪಾಗಿರುವಂತೆ ನೋಡಿಕೊಂಡು, ಅದನ್ನು ಉಳಿಸಲು ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸುವ ಕಾರ್ಯವಾಗಬೇಕು ಎಂದರು. ಈ ಯೋಜನೆ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಬಾಗಲಕೋಟೆ ತಾಲೂಕಿನಿಂದ ೧೮, ಬಾದಾಮಿ ತಾಲೂಕಿನಿಂದ ೨೮ ಗ್ರಾಮ ಪಂಚಾಯತಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಆರ್.ಶಂಕರ ಮಾತನಾಡಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳನ್ನು ಕೈಗೊಂಡು ಅವುಗಳಿಂದ ರೈತರ ಆರ್ಥಿಕ ಆದಾಯ ಹೆಚ್ಚಿಸುವ ಕಾರ್ಯವಾಗಬೇಕು. ಅಂದಾಗ ಮಾತ್ರ ಸಂಶೋಧನೆಗೆ ಬೆಳೆ ಬರುತ್ತದೆ. ತೋಟಗಾರಿಕೆ ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲನೇ ಸ್ಥಾನದಲ್ಲಿದ್ದರೆ, ಹಣ್ಣಿನ ಬೆಳೆಯಲ್ಲಿ ಎರಡನೇ ಸ್ಥಾನ, ಹೂ ಉತ್ಪಾದನೆಯಲ್ಲಿ ೬ನೇ ಸ್ಥಾನ, ತರಕಾರಿ ೮ನೇ ಸ್ಥಾನ ದಲ್ಲಿದೆ. ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗೆ ಶೇ.೯೦ ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಕಳೆದ ಎರಡು ವರ್ಷದಲ್ಲಿ ಮಾತ್ರ ಹೆಚ್ಚಿನ ಮಳೆಯಾಗಿದೆ. ಅದಕ್ಕೂ ಪೂರ್ವದಲ್ಲಿ ನೀರಿನ ಅಭಾವ ಹೆಚ್ಚಾಗಿತ್ತು. ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಸ್ಥಿತಿ ಉಂಟಾಗಿದ್ದು, ಅದನ್ನು ತಪ್ಪಿಸಬೇಕಾದರೆ ಅಂತರ್ಜಲ ಹೆಚ್ಚಿಸುವ ಕಾರ್ಯವಾಗಬೇಕು ಎಂದರು. ಅಟಲ್ ಭೂಜಲ ಯೋಜನೆಯ ನೋಡಲ್ ಅಧಿಕಾರಿ ಡಾ.ವಸಂತ ಗಾಣಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಯೋಜನೆಯ ಕೈಪಿಡಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿ.ಪಂ ಸದಸ್ಯರಾದ ಹೂವಪ್ಪ ರಾಠೋಡ, ಹನಮವ್ವ ಕರಿಹೊಳೆ, ಸಣ್ಣ ನೀರಾವರಿ ಇಲಾಖೆಯ ಸರಕಾರದ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಎಂ.ರವೀAದ್ರ, ತೋವಿವಿಯ ಕುಲಪತಿ ಡಾ.ಕೆ.ಎಂ.ಇAದಿರೇಶ, ವಿಜಯಪುರ ಸಣ್ಣ ನೀರಾವರಿ ಇಲಾಖೆಯ ಉತ್ತರ ವಲಯದ ಮುಖ್ಯ ಇಂಜಿನೀಯರ್ ಜೆ.ಟಿ.ಸುರೇಶ ವಿಸ್ತರಣಾ ನಿರ್ದೇಶಕ ಡಾ.ಎಸ್.ಐ.ಅಥಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.