ರೈತರ ಸಮಸ್ಯೆಗಳಿಗೆ ಸ್ಪಂದಿಸಿ : ಸಚಿವ ಆರ್.ಶಂಕರ
ನಿಮ್ಮ ಬಾಗಲಕೋಟೆ
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಸದಾ ರೈತರೊಂದಿಗೆ ಸಂಪರ್ಕ ಹೊಂದುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಕಾರ್ಯವಾಗಬೇಕೆಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಆರ್.ಶಂಕರ ಅಧಿಕಾರಿಗಳಿಗೆ ಸೂಚಿಸಿದರು.
ತೋವಿವಿಯ ಆವರಣದಲ್ಲಿರುವ ರೈತ ವಿಕಾಸ ಭವನದಲ್ಲಿ ಮಂಗಳವಾರ ತೋಟಗಾರಿಕೆ, ರೇಷ್ಮೆ ಬೆಳೆಗಾರರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು. ರೈತರ ಸಮಸ್ಯೆ ಹಾಗೂ ಭಾವನೆಗಳನ್ನು ಅರ್ಥಮಾಡಿಕೊಂಡು ಸ್ಪಂದಿಸುವ ಕೆಲಸವಾದಾಗ ಮಾತ್ರ ರೈತ ಅಭಿವೃದ್ದಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ತೋಟಗಾರಿಕೆ ಬೆಳೆಯಿಂದ ಕೆಲವೊಂದು ರೈತರಿಗೆ ಲಾಭವಾದರೆ ಇನ್ನು ಕೆಲವೊಂದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಸರಿದೂಗಿಸುವ ಕೆಲಸವಾಗಬೇಕು. ಒಂದು ಕಡೆ ಕೃಷಿ ಉತ್ಪನ್ನ, ಒಂದು ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಸರಕಾರದ ಯೋಜನೆಗಳು ಎಲ್ಲರಿಗೂ ತಲುಪಬೇಕು. ಹನಿ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಚಿಸಿದರು.
ರೈತರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ. ಪ್ರವಾಸದ ನಂತರ ರೈತರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಲಾಗುವುದು. ಪ್ರಸ್ತುತ ಬಜೆಟ್ನ ಗಾತ್ರ ಕಡಿಮೆ ಇರುವದರಿಂದ ಈ ವರ್ಷ ಗಾತ್ರ ಹೆಚ್ಚಿಸಲಾಗುವುದು. ಇಸ್ರೇಲ್ ಮಾದರಿಯ ದಾಳಿಂಬೆ ಬೆಳೆ ಬೆಳೆಯಲು ಸಚಿವರ ಸಲಹೆ ನೀಡಿದರು. ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲು ತಿಳಿಸಿದರು. ಇದಕ್ಕಾಗಿ ಹೊಸದಾಗಿ ಆ್ಯಪ್ ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸಿದರು. ಸಮಾಲೋಚನಾ ಸಭೆಯಲ್ಲಿ ರೈತರು ತಮ್ಮ ತಮ್ಮ ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ತಿಳಿಸಿದರು.
ನಂತರ ನಡೆದ ಸಂವಾದ ಸಭೆಯಲ್ಲಿ ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಸಚಿವರಲ್ಲಿ ಹೇಳಿಕೊಂಡರು. ಮುಧೋಳ ತಾಲೂಕಿನ ಶಿರೋಳ ಗ್ರಾಮದ ರೈತ ಯಶವಂತ ಘೋರ್ಪಡೆ ಮಾತನಾಡಿ ಶೀತಲ ಘಟಕ ಸ್ಥಾಪನೆಗೆ ಸರಕಾರದಿಂದ ನೀಡುವ ಶೇ.೩೦ ರಷ್ಟು ಸಹಾಯಧನ ತುಂಬಾ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸಲು ವಿನಂತಿಸಿದರು. ಅಲ್ಲದೇ ಹನಿ ನೀರಾವರಿ ಅಳವಡಿಕೆಗೆ ಪಡೆಯುವ ಸಹಾಯಧನ ೧೫ ವರ್ಷದ ನಂತರವೂ ಪಡೆಯಲು ಸಾಧ್ಯವಾಗುತ್ತಿಲ್ಲೆವೆಂದಾಗ ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಜಂಟಿ ತೋಟಗಾರಿಕೆ ನಿರ್ದೇಶಕ ಸೋಮಶೇಕರ ೧ ಕೋಟಿ ರೂ.ಗಳವರೆಗೆ ಒಂದು ಉತ್ಪನ್ನ ಒಂದು ಜಿಲ್ಲೆಗೆ ಯೋಜನೆಯಡಿ ಕಳುಹಿಸಲಾಗಿದ್ದು, ಅದರ ಜೊತೆಗೆ ಇತೆರೆ ಬೆಳೆಗಳನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ತೊದಲಬಾಗಿಯ ರೈತ ಶಶಿಕಾಂತ ಮಾತನಾಡಿ ಎಫ್ಪಿಓಅಡಿ ಒಂದು ಸಾವಿರ ರೈತರಿದ್ದು, ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಮನವಿ ಮಾಡಿದರಲ್ಲದೇ ಶೀತಲ ಘಟಕ ಪ್ರಾರಂಭಕ್ಕೆ ಶೇ.೧೦ ರಷ್ಟು ರೈತರ ವಂತಿಕೆ ಉಳಿದ ಶೇ.೯೦ ರಷ್ಟು ಸರಕಾರದಿಂದ ಸಹಾಯಧನ ನೀಡುವಂತಾಗಬೇಕು ಎಂದರು. ಬೀಳಗಿಯ ರೈತ ಆನಂದ ಮೊಕಾಶಿ ಮಾತನಾಡಿ ಗೋಡಂಬಿ ಬೆಳೆಗೂ ಸಹ ಸಹಾಯಧನ ನೀಡುವಂತೆ ಕೋರಿದರು. ಮಾರಾಟವಾದ ರೇಷ್ಮೆ ಉತ್ಪನ್ನಕ್ಕೆ ಬೇಗನೇ ಪಾವತಿಯಾಗಬೇಕು ಎಂದರು. ಸಾವಳಗಿಯ ರೈತ ಸಂಜೀವ ನಾಂದ್ರೇಕರ ಮಾತನಾಡಿ ಯಾಂತ್ರಿಕರಣಕ್ಕೆ ಖರೀದಿಗೆ ಶೇ.೫೦ ರಷ್ಟು ಸಹಾಯಧನ ನೀಡುವಂತೆ ವಿನಂತಿಸಲಾಯಿತುಮೀ ಬಗ್ಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ಎಸ್.ಐ.ಅಥಣಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಹುಲ್ಕುಮಾರ ಬಾವಿದೊಡ್ಡಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಹುಲ್ಲೊಳ್ಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸುಭಾಷ ಸುಲ್ತಿ ಸೇರಿದಂತೆ ಜಿಲ್ಲೆಯ ತೋಟಗಾರಿಕೆ, ರೇಷ್ಮೆ ಬೆಳೆಗಾರರು ಉಪಸ್ಥಿತರಿದ್ದರು.