ನಿಮ್ಮ ಸುದ್ದಿ ವಿಜಯಪುರ
ಕಾಂಗ್ರೆಸ್ ಪಕ್ಷ ನಶಿಸಿ ಹೋಗುತ್ತಿದ್ದು ಆ ಪಕ್ಷದ ನಡುವಳಿಕೆಯಿಂದ ಬೇಸತ್ತ ೧೫ ರಿಂದ ೨೦ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಚಿವ ರಮೇಶ ಜಾರಕಿಹೊಳಿ ಅವರು ನಾಲ್ಕೈದು ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ಕೊಡಲು ಸಿದ್ದರಿದ್ದಾರೆ ಎಂದು ಹೇಳಿದ್ದರು. ಅದನ್ನು ಉಲ್ಲೇಖಿಸಿ ಮಾತನಾಡಿದ ಕಟೀಲ್ ಅವರು ಕೇವಲ ನಾಲ್ಕೈದು ಶಾಸಕರಲ್ಲಿ ಹತ್ತಿಪ್ಪತ್ತು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದರು.
ಆದರೆ ಸದ್ಯ ಸರಕಾರಕ್ಕೆ ಯಾವುದೇ ಧಕ್ಕೆ ಇಲ್ಲದ ಕಾರಣ ಅವರೆಲ್ಲರ ಸಂಪರ್ಕ ಹೊಂದಿದ್ದೇವೆ. ಮುಂಬುರುವ ಉಪಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ಖಾಲಿಯಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಯಾರನ್ನು ಕಣಕ್ಕಿಳಿಸಬೇಕೆಂಬ ಚರ್ಚೆ ಇನ್ನೂ ನಡೆದಿಲ್ಲ. ಸ್ಥಳೀಯ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದರು.
ಪಕ್ಷದ ನಾಯಕರ ವಿರುದ್ಧ ಮೇಲಿಂದ ಮೇಲೆ ಟೀಕೆ ಮಾಡುತ್ತಿರುವ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ್) ಅವರಿಗೆ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಈವರೆಗೆ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು.
ರಾಮಮಂದಿರ ನಿರ್ಮಾಣದ ಜಾಗೆ ಕುರಿತಂತೆ ಸುಪ್ರೀಂ ಕೋರ್ಟ್ ಈಗಾಗಲೆ ಮಂದಿರ ಕಟ್ಟಲು ಅನುಮತಿ ನೀಡಿದೆ. ಹೀಗಿರುವಾಗ ಪ್ರತಿಪಕ್ಷ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಅವರಿಗೆ ಸಂವಿಧಾನದ ಮೇಲೆ ಗೌರವ ಇರಬೇಕು. ಅನವಶ್ಯಕ ಹೇಳಿಕೆ ನೀಡುವುದು ಸರಿಯಲ್ಲ. ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸುತ್ತಿರುವ ದೇಣಿಗೆ ಒತ್ತಾಯದಿಂದಲ್ಲ. ದೇಣಿಗೆ ನೀಡುವುದು ಅವರಿಗೆ ಬಿಟ್ಟ ವಿಷಯ ಎಂದು ತಿಳಿಸಿದರು.