ನಿಮ್ಮ ಸುದ್ದಿ ಬಾಗಲಕೋಟೆ
ತಾಲೂಕಿನ ಕಲಾದಗಿ ಕೆರಕಲಮಟ್ಟಿ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ, ಕಲಾದಗಿ-ಕಾತರಕಿ ಬ್ಯಾರೇಜ ಪುನರುಜ್ಜೀವನ, ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ತಾಲೂಕಿನ ಹಿರೇಶೇಲ್ಲಿಕೇರಿ ಗ್ರಾಮದಲ್ಲಿ ಬೋರೆವೆಲ್ ಕಾಮಗಾರಿ, ಕಾಗವಾಡ-ಕಲಾದಗಿ ರಾಜ್ಯ ಹೆದ್ದಾರಿ ಸೇತುವೆ ನಿರ್ಮಾಣ ಕಾಮಗಾರಿ ಸೇರಿದಂತೆ ಅಂದಾಜು ೯ ಕೋಟಿ ರೂ.ಗಳಿಗೂ ಅಧಿಕ ವಿವಿಧ ಕಾಮಗಾರಿಗಳಿಗೆ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರುಗೇಶ ನಿರಾಣಿ ಬುಧವಾರ ಚಾಲನೆ ನೀಡಿದರು.
ಕಲಾದಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗ ಚಾಲನೆ ನೀಡಿ ಮಾತನಾಡಿದ ಅವರು ಆಲಮಟ್ಟಿ ಜಲಾಶಯದಲ್ಲಿ ೫೨೬ ಮೀಟರ್‌ವರೆಗೆ ನೀರು ಬಂದರು ಸಹ ಮುಳುಗದಂತೆ ೪೫೦ ಲಕ್ಷ ರೂ.ಗಳ ವೆಚ್ಚದಲ್ಲಿ ಕಲಾದಗಿ-ಕಾಗವಾಡ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಕಲಾದಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ೫೧೯ ಮೀಟರನಲ್ಲಿ ಮುಳುಗಡೆಯಾಗದ ಸುಮಾರು ೪.೨೦ ಕ.ಮೀ ಹೆದ್ದಾರಿ ಮೇಲೆ ಸಂಚರಿಸುತ್ತಾರೆ. ಈ ಸೇತುವೆ ನಿರ್ಮಿಸುವದರಿಂದ ಕೇವಲ ೧.೯೫ ಕಿ.ಮೀ ನಲ್ಲಿ ತಮ್ಮ ಜಮೀನಿಗೆ ಹೋಗಲು ಅನುಕೂಲವಾಗಲಿದೆ. ಅಲ್ಲದೇ ರಾಜ್ಯ ಹೆದ್ದಾರಿ ಮೇಲೆ ತಿರುಗಾಡುವ ದಟ್ಟನೆ ವಾಹನಗಳ ಅಪಾಯದಿಂದ ಸುರಕ್ಷಿತವಾಗಿ ತಿರುಗಾಡಬಹುದಾಗಿದೆ ಎಂದರು.
ಅಲ್ಲದೇ ೨.೫ ಕೋಟಿ ರೂ.ಗಳ ವೆಚ್ಚದಲ್ಲಿ ಕಲಾದಗಿ ಕಾತರಕಿ ಬ್ಯಾರೇಜ ಪುನರುಜ್ಜೀವನ, ೧೦ ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ೫೦ ಲಕ್ಷ ವೆಚ್ಚದಲ್ಲಿ ಎಸ್‌ಸಿಪಿ, ಟಿ.ಎಸ್.ಪಿಯಡಿ ಕೊಳವೆಬಾವಿ ಕೊರೆಯುವ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಕೆರೆಗಳನ್ನು ತುಂಬಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಹೆರಕಲ್ ಹತ್ತಿರ ೭೦ ಕೋಟಿ ರೂ.ಗಳ ಬಹು ಉದ್ದೇಶಿತ ಬ್ಯಾರೇಜ ೫೧೯ ಮೀಟರ್‌ಗೆ ಎತ್ತರ, ಹೊಸ ೧೫ ಕೋಟಿ ರೂ.ಗಳ ಹೆಚ್ಚುವರಿ ಕಾಮಗಾರಿಗೆ ಟೆಂಡರ್, ಸಗಣಿಯಿಂದ ಪೇಂಟ್ ನಿರ್ಮಿಸಲು ಪ್ರತಿ ಗ್ರಾಮಗಳಲ್ಲಿ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಇದರಿಂದ ಪ್ರತಿ ಯುನಿಟ್‌ಗೆ ೧೫ ಲಕ್ಷ ಆದಾಯ ಬರಲಿದೆ ಎಂದರು.
ಸಕ್ಕರೆ ಕಾರ್ಖಾನೆಯಲ್ಲಿ ನಿರುಪಯುಕ್ತ ತ್ಯಾಜ್ಯದಿಂದ ದಿನಕ್ಕೆ ೪೦೦ ಟನ್ ಸಿಎನ್‌ಜಿ ಉತ್ಪಾದನೆಯಾಗಲಿದ್ದು, ಪ್ರತಿ ಕೆಜಿಗೆ ೪೦ ರೂ. ಬೀಳಲಿದೆ. ಇದನ್ನು ಶೀಘ್ರದಲ್ಲಿಯೇ ಕಾರು ಮತ್ತು ಟ್ಯಾಕ್ಟರ್‌ಗಳಿಗೆ ಬಳಸಲಾಗುತ್ತಿದೆ. ರೈತರಿಗೆ ಲಕ್ಷಾಂತರ ರೂ.ಗಳ ಉಳಿತಾಯವಾಗಲಿದೆ ಎಂದರು. ಬೀಳಗಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೭ ನೇ ರ‍್ಯಾಂಕ್ ಬಂದಿದ್ದು, ನಿರಂತರವಾಗಿ ಶಾಲೆಗಳು ಚಟುವಟಿಕೆಗಳಲ್ಲಿ ತೊಡಗುವ ಮೂಲ ಬಾಗಿಲು ಮುಚ್ಚದ ಶಾಲೆಯಾಗಿ ಪರಿಣಮಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ ಮಳೆಗಾಲ ಹಾಗೂ ಮಹಾಪೂರಗಳು ಸಂಭವಿಸಿದಾಗ ಕಲಾದಗಿ-ಕಾಗವಾಡ ಸಂಪರ್ಕ ಸೇತುವೆ ನಿರ್ಮಾಣ ಅಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಹೂವಪ್ಪ ರಾಠೋಡ, ಕೆಬಿಜೆಎನ್.ಎಲ್ ಕಾರ್ಯನಿರ್ವಾಹಕ ಅಭಿಯಂತರ ಹನಮಂತ ಕೆ., ಎಚ್.ಬಿ.ಕೊನ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.