ಗಡಿ ಭಾಗದಲ್ಲಿ ಕಟ್ಟೆಚ್ಚರಕ್ಕೆ ಡಿಸಿಎಂ ಸೂಚನೆ
ನಿಮ್ಮ ಸುದ್ದಿ ಬಾಗಲಕೋಟೆ
ಪಕ್ಕದ ರಾಜ್ಯಗಳಲ್ಲಿ ಕೊರೋನಾ ಅಲೆ ಹೆಚ್ಚಾಗಿದ್ದು ರಾಜ್ಯದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಚುರುಕುಗೊಳಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.
ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ, ಗೋವಾ ಹಾಗೂ ಕೇರಳದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ.
ನಮ್ಮ ರಾಜ್ಯದ ಗಡಿ ಭಾಗದಲ್ಲಿರುವ ಬೀದರ್, ಬೆಳಗಾವಿ, ಕಲಬುರ್ಗಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಕೆಲ ತಾಲೂಕುಗಳು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುತ್ತವೆ. ಇಲ್ಲಿ ಕೂಲಿ ನಾಲಿ ಮಾಡುತ್ತಿರುವ ಜನರು ಸಂಚಾರ ಮಾಡುತ್ತಿರುತ್ತಾರೆ.
ಗೋವಾ ಭಾಗಕ್ಕೂ ಸಹ ಈ ಜಿಲ್ಲೆಗಳ ಜನರು ಹೆಚ್ಚು ಸಂಚಾರ ಮಾಡುತ್ತಾರೆ. ಇವರಿಗೆ ಕೊರೊನಾ ರೋಗ ಹಬ್ಬಿ ಪ್ರಸಾರವಾಗುವ ಸಾಧ್ಯತೆಗಳಿರುತ್ತವೆ.
ಈ ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಚಕ್ ಪೋಸ್ಟ್ ಗಳಲ್ಲಿ ತಪಾಸಣೆ ಕಾರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುತ್ತದೆ. ಈ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.