ಕೃಷ್ಣ ಮೇಲ್ದಂಡೆ ಯೋಜನೆಯಡಿ 130 ಟಿಎಂಸಿ ನೀರು ಉಪಯೋಗಿಸುವ ದಿಸೆಯಲ್ಲಿ ಸರ್ಕಾರದಿಂದ ಕಾರ್ಯಕ್ರಮ ರೂಪಿಸಲು ಬದ್ಧ’: ಶ್ರೀ ಗೋವಿಂದ ಕಾರಜೋಳ
ನಿಮ್ಮ ಸುದ್ದಿ ವಿಜಯಪುರ
ಕೃಷ್ಣ ಮೇಲ್ದಂಡೆ ಯೋಜನೆಯಡಿ 130 ಟಿಎಂಸಿ ನೀರು ಉಪಯೋಗಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.
ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಮುಳವಾಡ ಏತ ನೀರಾವರಿ ಹಂತ ಮೂರರ ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ 56 ಕಿಮಿ ದಿಂದ 66 ವರೆಗಿನ ಕಾಮಗಾರಿಯ ಮುಖಾಂತರ ರಾಜನಾಳ, ತಡವಲಗಾ ಹಾಗೂ ಹಂಜಗಿ ಕೆರೆಗಳನ್ನು ತುಂಬುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಮಿಶ್ರಾ ಅವರ ತೀರ್ಪಿನನ್ವಯ ಹಂಚಿಕೆಯಾದ 130 ಟಿಎಂಸಿ ನೀರು ಉಪಯೋಗಿಸಲು ಉದ್ದೇಶಿಸಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು.
ಈ ಯೋಜನೆಯಡಿ 20 ಗ್ರಾಮಗಳ ಸ್ಥಳಾಂತರ 1.34 ಲಕ್ಷ ಎಕರೆ ಭೂಮಿಗೆ ಪರಿಹಾರ ನಂತರ 20 ಗ್ರಾಮಗಳ ಜನರಿಗೆ ಪುನರ್ವಸತಿ ಮತ್ತು ಕಟ್ಟಡಗಳಿಗೆ ಮತ್ತು ಆಸ್ತಿಪಾಸ್ತಿಗೆ ಪರಿಹಾರ ಕೊಡಬೇಕಾಗಲಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸೋಣ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿ ಮತ್ತು ನೀರಿನ ವಿಷಯದಲ್ಲಿ ಒಗ್ಗಟ್ಟಾಗಿ ಇರೋಣ ಎಂದ ಅವರು ನಮ್ಮ ಸರಕಾರ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 5600 ಕೋಟಿ ರೂ ಅನುದಾನ ಒದಗಿಸಿದ್ದು ಹೆಚ್ಚಿನ ಅನುದಾನ ಸಹ ಕೋರಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಅಲ್ಪ ಹಿನ್ನಡೆಯಾಗಿದ್ದು ಮುಂದಿನ ದಿನಗಳಲ್ಲಿ ಇದರ ಪ್ರಗತಿಯ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆಯ ದೃಷ್ಟಿಯಿಂದ ಆಲಮಟ್ಟಿ ಜಲಾಶಯದಲ್ಲಿ ಕುಡಿಯುವ ನೀರಿನ ಸಂಗ್ರಹಕ್ಕೆ ವಿಶೇಷ ಗಮನ ನೀಡಿದ್ದು ಇದನ್ನು ಹೊರತುಪಡಿಸಿ ಕಾಲುವೆಗಳಿಗೆ ನೀರು ನೀರಿನ ಸಂಗ್ರಹದ ಆಧಾರದ ಮೇಲೆ ಪೂರೈಸಲಾಗುವುದು ಎಂದು ತಿಳಿಸಿದ ಅವರು ಈಗ ಮುಳವಾಡ ಏತ ನೀರಾವರಿ ಹಂತ-3 ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ 56 ರಿಂದ 66 ರವರೆಗಿನ ಕಾಮಗಾರಿಯ ಮೂಲಕ ರಾಜನಾಳ ತಡವಲಗಾ ಹಾಗೂ ಹಂಜಗಿ ಈ ಮೂರು ಕೆರೆಗಳಿಗೆ ಮುಂದಿನ 60 ದಿನಗಳಲ್ಲಿ ನೀರು ಹರಿಸಬೇಕು.
ಒಟ್ಟು 104 ಕೋಟಿ ರೂ. ವೆಚ್ಚದಲ್ಲಿ ಯೋಜನೆಯಡಿ ಮೂರು ಕೆರೆಗಳನ್ನು ತುಂಬುವ ಕಾರ್ಯಕ್ರಮವನ್ನು 18 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಅದರಂತೆ ಮುಳವಾಡ ಏತ ನೀರಾವರಿ ಯೋಜನೆ ಹಂತ-3 ಯೋಜನೆಯಡಿ ಬಿಜಾಪುರ ಜಿಲ್ಲೆಯ ಸುಮಾರು 2.7 ಲಕ್ಷ ಹೆಕ್ಟೇರ್ ಕ್ಷೇತ್ರವು ನೀರಾವರಿಗೆ ಒಳಪಡಲಿದೆ. ಈಗಾಗಲೇ ಕೃಷ್ಣಾ ಕಣಿವೆ ಸ್ಕೀಂ- ಬಿ ರಡಿ 54.431 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿರುತ್ತದೆ.
ಈ ಯೋಜನೆಯಲ್ಲಿ ಪ್ರಮುಖವಾಗಿ ಬರುವ ಮೂರು ಮುಖ್ಯ ಸ್ಥಾವರಗಳು ಬಳೂತಿ, ಹನುಮಾಪುರ ಜಾಕ್ವೇಲ್ ಮತ್ತು ಮಸೂತಿ ಜಾಕ್ವೇಲ್ ಸಂಬಂಧಿಸಿದ ಸಿವಿಲ್ ಮತ್ತು ಇಲೆಕ್ಟ್ರೋ ಮೆಕ್ಯಾನಿಕಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ತಿಡಗುಂದಿ ಶಾಖಾ ಕಾಲುವೆಯು ಬಿಜಾಪುರ ಮುಖ್ಯ ಕಾಲುವೆ 70.05 ಕಿ.ಮೀ ರಲ್ಲಿ ಮದಬಾವಿ ಗ್ರಾಮದ ಬಳಿ ಆಪ್‍ಟೇಕ್ ಆಗುತ್ತದೆ. ಈ ಕಾಲುವೆಯಿಂದ ವಿಜಯಪುರ ಹಾಗೂ ಇಂಡಿ ತಾಲೂಕಿನ ಸುಮಾರು 25.572 ಹೆಕ್ಟೇರ್ ಕ್ಷೇತ್ರವು ನೀರಾವರಿಗೆ ಒಳಪಡುತ್ತದೆ. ತಿಡಗುಂದಿ ಶಾಖಾ ಕಾಲುವೆಯು ಸುಮಾರು 66.00 ಕಿ. ಮೀ ಗಳಷ್ಟು ಉದ್ದವಿರುತ್ತದೆ. ತಿಡಗುಂದಿ ಶಾಖಾ ಕಾಲುವೆಯು 14.205 ಕ್ಯೂಮೆಕ್ಸ್ 5.65 ಟಿಎಂಸಿ ಯಷ್ಟು ನೀರಿನ ಸಾಮಥ್ರ್ಯವನ್ನು ಹೊಂದಿರುತ್ತದೆ ಎಂದು ಹೇಳಿದರು.
ತಿಡಗುಂದಿ ಶಾಖಾ ಕಾಲುವೆಯ 0.00 ಕಿ.ಮೀ ದಿಂದ 40.00 ರವರೆಗಿನ ಕಾಮಗಾರಿಯು ಪೂರ್ಣಗೊಂಡಿದ್ದು, ಪ್ರಾಯೋಗಿಕ ಚಾಲನೆಯಲ್ಲಿ ನೀರನ್ನು ಹರಿಸಿ ಮಧಬಾವಿ, ನಾಗಠಾಣ, ಅರಕೇರಿ, ಬರಟಗಿ, ತಿಡಗುಂದಿ ಮತ್ತು ಮಖಣಾಪುರ ಸಣ್ಣ ನೀರಾವರಿ ಕೆರೆಯನ್ನು ಹಾಗೂ ಕನ್ನೂರ, ಅಥರ್ಗಾ ಬಾಂದಾರಗಳನ್ನು ತುಂಬಿಸಲಾಗಿದೆ.
ತಿಡಗುಂದಿ ಶಾಖಾ ಕಾಲುವೆಯ 40 ಕಿಮೀ ರಿಂದ 56 ರವರೆಗಿನ ಕಾಮಗಾರಿಯನ್ನು ಮೆ. ಆದಿತ್ಯ ಕನ್ಸ್ಟ್ರಕ್ಷನ್ ಅವರಿಗೆ ವಹಿಸಿಕೊಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ ಎಂದರು.
ತಿಡಗುಂದಿ ಶಾಖಾ ಕಾಲುವೆಯ 56 ಕಿಮೀ ರ ನಂತರ ಗುರುತ್ವಾಕರ್ಷಣೆ ಎಂ.ಎಸ್ ಪೈಪ್ ವಿತರಣೆ ಜಾಲದ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ. ತಿಡಗುಂದಿ ಶಾಖಾ ಕಾಲುವೆಯ 56 ಕಿಮೀ ದಲ್ಲಿ ವಿತರಣಾ ಕೋಣೆ ನಿರ್ಮಿಸಿ ನಂತರ ಗುರುತ್ವಾಕರ್ಷಣೆ ಮತ್ತು ಎಂ.ಎಸ್ ಪೈಪ್ ವಿತರಣಾ ಜಾಲದ ಮೂಲಕ ನೀರಾವರಿ ಒದಗಿಸಲಾಗುತ್ತದೆ. ಈ ಯೋಜನೆಯಿಂದ ಇಂಡಿ ತಾಲೂಕಿನ 14,500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
ಈ ಯೋಜನೆಯಿಂದ ಇಂಡಿ ತಾಲೂಕಿನ ವಿವಿಧ 15 ಗ್ರಾಮಗಳು ನೀರಾವರಿಗೆ ಒಳಪಡುತ್ತವೆ. ಈ ಯೋಜನೆಯಿಂದ ಅಥರ್ಗಾ, ರಾಜನಾಳ ತಡವಲಗಾ ಮತ್ತು ಹಂಜಗಿ ಸಣ್ಣ ನೀರಾವರಿ ಕೆರೆಗಳನ್ನು ತುಂಬಲಾಗುತ್ತದೆ.ಈ ಯೋಜನೆಯಡಿಯಲ್ಲಿ ಬರುವ ಕೆರೆಗಳನ್ನು 60 ದಿನಗಳಲ್ಲಿ ತುಂಬಿಸಲು ಯೋಜಿಸಲಾಗಿದೆ. ಯೋಜನೆಯ ಮೊತ್ತ 100.49 ಕೋಟಿ ರೂ. ಗಳಾಗಿರುತ್ತದೆ ಎಂದು ಅವರು ತಿಳಿಸಿದರು.
ಈ ಕಾಮಗಾರಿಯನ್ನು ಮೆ.ಎಚ್.ಡಿ ಇನ್ಫಾಸ್ಟ್ರಕ್ಚರ್, ಬೆಂಗಳೂರು ಇವರಿಗೆ ವಹಿಸಿಕೊಡಲಾಗಿದ್ದು, ದಿನಾಂಕ 12-11- 2020 ರಂದು ಕರಾರು ಒಪ್ಪಂದ ಆಗಿರುತ್ತದೆ. ಈ ಕಾಮಗಾರಿಗೆ 18 ತಿಂಗಳುಗಳ ಕಾಲಾವಕಾಶ ನೀಡಲಾಗಿದ್ದು, ಕಾಮಗಾರಿ ಮುಕ್ತಾಯ ದಿನಾಂಕ 11-5-2022 ಆಗಿರುತ್ತದೆ ಎಂದು ಅವರು ತಿಳಿಸಿದರು.
ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ, ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀ ಅಶೋಕ ಅಲ್ಲಾಪುರ್, ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ಡಿವೈಎಸ್ಪಿ ಶ್ರೀಧರ್ ದಡ್ಡಿ, ಮುಖ್ಯ ಅಭಿಯಂತರ ಎಚ್.ಜಗದೀಶ, ಅಧೀಕ್ಷಕ ಅಭಿಯಂತರ ಜಗದೀಶ ರಾಠೋಡ, ಜಿ.ಪಂ ಸದಸ್ಯರಾದ ಭೀಮು ಬಿರಾದಾರ, ನವೀನ ಅರಕೇರಿ, ಶ್ರೀ ಅಣ್ಣಪ್ಪ ಬಿದರಕೋಟೆ ಶ್ರೀಮತಿ ಸುವರ್ಣ ಶಿವೂರ್ ಸೇರಿದಂತೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು