ಹೋಳಿ ಹಬ್ಬ : ಬಣ್ಣದ ಆಟ, ಬಣ್ಣದ ಬಂಡಿ ಮೆರವಣಿಗೆ ನಿಷೇಧ
ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್-19 ಎರಡನೇ ಅಲೆಯಿಂದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೋಳಿ ಹಬ್ಬದ ನಿಮಿತ್ಯ ಮಾರ್ಚ 29 ರಿಂದ 31ರ ವರೆಗೆ ಮೂರು ದಿನಗಳ ಕಾಲ ಬಾಗಲಕೋಟೆ ನಗರದಲ್ಲಿ ಜರುಗಲಿರುವ ಬಣ್ಣದ ಆಟ ಹಾಗೂ ಬಣ್ಣದ ಬಂಡಿ ಮೆರವಣಿಗೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಧಾರ್ಮಿಕ ಪೂಜೆ ಹಾಗೂ ಸಾಂಪ್ರದಾಯಕ ಆಚರಣೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿದ ಮಾರ್ಗಸೂಚಿಗಳು ಅನ್ವಯವಾಗುತ್ತದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಹಾಗೂ ವಿಪತ್ತು ನಿರ್ವಹನಾ ಕಾಯ್ದೆ 2005 ರಂತೆ ಜಿಲ್ಲಾಡಳಿತ ಕ್ರಮವಹಿಸಲಿದೆ.
ಬಾಗಲಕೋಟೆ ನಗರದಲ್ಲಿ ಪ್ರತಿ ವರ್ಷ ಹೋಳಿ ಹಬ್ಬವನ್ನು ವಿಜೃಂಬನೆಯಿಂದ 3 ದಿನಗಳ ಕಾಲ ಅಚರಿಸುತ್ತಾ ಬಂದಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆ ಹರಡುತ್ತಿದ್ದು, ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಅವಶ್ಯಕತೆ ಇರುತ್ತದೆ.
ಈ ಕುರಿತು ಮಾರ್ಚ 16ರಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೋಳಿ ಹಬ್ಬ ಆಚರಣೆಯ ಸಮಿತಿಯ ಸದಸ್ಯರೊಂದಿಗೆ ಹೋಳಿ ಹಬ್ಬ ಆಚರಿಸುವ ಬಗ್ಗೆ ಅಂತೀಮ ನಿರ್ಧಾರ ತಿಳಿಸಲು ತಿಳಿಸಲಾಗಿತ್ತು. ಮಾರ್ಚ 20 ರಂದು ಹೋಳಿ ಆಚರಣಾ ಸಮಿತಿಯ ಅಧ್ಯಕ್ಷ ಕಳಕಪ್ಪ ಬಾದವಾಡಗಿ, ಸಂಜೀವ ವಾಡಕರ, ಮಹಾಬಳೇಶ್ವರ ಗುಡಗುಂಟಿ ಅವರು ಸರಳವಾಗಿ , ಸಾಂಕೇತಿಕವಾಗಿ ಆಚರಿಸುವ ಕುರಿತು ತಿಳಿಸಿರುವುದಾಗಿ ಆದೇಶದಲ್ಲಿ ಹೇಳಿದ್ದಾರೆ.
ಹೋಳಿ ಹಬ್ಬ : 23 ರಂದು ಶಾಂತತಾ ಸಭೆ
ಜಿಲ್ಲೆಯಲ್ಲಿ ಮಾರ್ಚ 28ರಂದು ಆಚರಿಸಲ್ಪಡುವ ಹೋಳಿ ಹಬ್ಬದ ಕುರಿತು ಜಿಲ್ಲಾಧಿಕಾರಿ ಮಾರ್ಚ 23 ರಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶಾಂತತಾ ಸಮಿತಿ ಸಭೆ ಜರುಗಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.