ನಿಮ್ಮ ಸುದ್ದಿ ವಿಜಯಪುರ
ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಶುಕ್ರವಾರ ಮತದಾನ ಆರಂಭವಾಗಿದೆ. ಮಂದ ಗತಿಯಲ್ಲಿ ನಡೆದಿದೆ.
ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ, ಬಿಜೆಪಿಯ ಪಿ.ಎಚ್.ಪೂಜಾರ ಹಾಗೂ ಐವರು ಪಕ್ಷೇತರರು ಸೇರಿದಂತೆ ಒಟ್ಟು 7 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತಾಲೂಕಿನ ಜುಮನಾಳ ಗ್ರಾಪಂ ಮತಗಟ್ಟೆಯಲ್ಲಿ ಬೆಳಗ್ಗೆ 9 ಗಂಟೆ ಹೊತ್ತಿಗೆ ಒಟ್ಟು 21 ಜನ ಮತದಾರರಲ್ಲಿ ಕೇವಲ ಒಬ್ಬ ಮತದಾರ ಮತ ಚಲಾಯಿಸಿದ್ದು ಕಂಡು ಬಂತು.
ತಾಲೂಕಿನ ಸಾರವಾಡ ಗ್ರಾಪಂ ನಲ್ಲಿ ಬೆಳಗ್ಗೆ 10 ಗಂಟೆ ಹೊತ್ತಿದೆ 21 ಮತದಾರರ ಪೈಕಿ 9 ಜನರು ಮತ ಚಲಾಯಿಸಿದ್ದು ಕಂಡು ಬಂತು.
ಸಂಜೆ 4ರ ವರೆಗೆ ಮತದಾನಕ್ಕೆ ಅವಕಾಶವಿರುವ ಹಿನ್ನೆಲೆಯಲ್ಲಿ ಉಳಿದ ಮತದಾರರು ತಮಗೆ ಅನುಕೂಲವಾದ ಸಮಯದಲ್ಲಿ ಮತ ಹಾಕುವ ನಿರೀಕ್ಷೆಯಿದೆ.
ಈ ಬಾರಿ ಶೇ. 95ಕ್ಕಿಂತಲೂ ಹೆಚ್ಚು ಮತದಾನ ನಿರೀಕ್ಷಿಸಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ 208 ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 203 ಸೇರಿದಂತೆ ಒಟ್ಟು 411 ಮತಗಟ್ಟೆಗಳನ್ನು ತೆರೆಯಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ 3940 ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 3450 ಸೇರಿದಂತೆ ಒಟ್ಟು 7390 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. 3538 ಪುರುಷ ಮತ್ತು 3858 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 948 ಮತದಾರರು ಸಹಾಯಕರನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು ವಿಶೇಷ.
ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.