ಪರಿಷತ್ ಚುನಾವಣೆ | ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ
ನಿಮ್ಮ ಸುದ್ದಿ ಬಾಗಲಕೋಟೆ
ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸೋಮವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮತದಾನ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ನಡೆದಿದ್ದು, ಪದವೀಧರರು ಹಾಗೂ ಶಿಕ್ಷಕರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿರುವುದು ಕಂಡುಬಂದಿತು. ಮತದಾನ ಮಾಡಲು ಆಗಮಿಸುತ್ತಿರುವ ಅರ್ಹ ಮತದಾರರಿಗೆ ಆರೋಗ್ಯ ಸಿಬ್ಬಂದಿಗಳು ಸ್ಕ್ರೀನಿಂಗ್ ಮಾಡಿ, ಮಾಸ್ಕಗಳನ್ನು ವಿತರಿಸಿದರು. ಮತದಾರರು ಸದರಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಪ್ರಾರಂಭದಲ್ಲಿ ಮತದಾನ ಮಂದಗತಿಯಲ್ಲಿ ನಡೆದರು ನಂತರ ಚುರುಕಾಗಿ ನಡೆದಿರುವುದು ಕಂಡುಬಂದಿತು.
ಮತದಾನ ಪ್ರಕ್ರಿಯೆ ವೀಕ್ಷಣೆಗೆ ಮಾದ್ಯಮ ತಂಡ ಬೆಳಿಗ್ಗೆ 9.30 ಗಂಟೆಗೆ ಹೋದಾಗ ಬಾಗಲಕೋಟೆ ತಾ.ಪಂ ಕಚೇರಿಯ ಮತಗಟ್ಟೆ ಸಂಖ್ಯೆ 103 ರಲ್ಲಿ ಪದವೀಧರ ಕ್ಷೇತ್ರದಿಂದ 24, ಶಿಕ್ಷಕರ ಕ್ಷೇತ್ರದಿಂದ 12 ಮತಗಳು ಚಲಾವಣೆಗೊಂಡಿದ್ದವು. 10 ಗಂಟೆಗೆ ಕಿಲ್ಲಾ ಓಣಿಯ ಸರಕಾರಿ ಕನ್ನಡ ಮಹಿಳಾ ಶಾಲೆಯ ಮ.ಸಂ 105 ರಲ್ಲಿ ಪದವೀಧರ 42, ಶಿಕ್ಷಕ ಕ್ಷೇತ್ರ 11, ಮ.ಸಂ.105ಎ ರಲ್ಲಿ ಪದವೀಧರ 47, ಶಿಕ್ಷಕರ ಕ್ಷೇತ್ರ 20 ಮತಗಳು ಚಲಾವಣೆಗೊಂಡರೆ, ಬೀಳಗಿ ಮ.ಸಂ.91ಎ ರಲ್ಲಿ ಪದವೀಧರ 206, ಶಿಕ್ಷಕರ 32, ಮ.ಸಂ. 91 ರಲ್ಲಿ ಪದವೀಧರ 201, ಶಿಕ್ಷಕರ ಕ್ಷೇತ್ರದಲ್ಲಿ 17 ಜನ ಮತ ಚಲಾಯಿಸಿದ್ದರು.
ಮೊದಲಬಾರಿಗೆ ಪದವೀಧರರ ಮತದಾರರು ತಮ್ಮ ಹಕ್ಕು ಚಲಾಯಿಸಿದ ಬಗ್ಗೆ ಅನುಭವವನ್ನು ಹಂಚಿಕೊಂಡರು. ಬೀಳಗಿ ತಾಲೂಕಿನ ಬೀಳಗಿ ಪಟ್ಟಣದ ಕವಿತಾ ಕುಪ್ಪಸ್ತ, ಉಮಾ ಗಾಣಿಗೇರ, ಸಿದ್ದಾಪೂರದ ಈರಪ್ಪ ಬೇವಿನಮಟ್ಟಿ, ಉಮೇಶ ಕರವಾಣಗಿ, ರಾಜೇಶ್ವರಿ ಮಲ್ಲಿಕಾರ್ಜುನಮಠ, ಅರ್ಚನಾ ಅರಕೇರಿ, ದ್ರಾಕ್ಷಾಯಿಣಿ ಲಮಾಣಿ, ರಾಜೇಶ್ವರಿ ಡಕಳಾಪೂರ ಯುವ ಮತದಾರರು ಪ್ರಥಮ ಬಾರಿಗೆ ಮತ ಚಲಾಯಿಸಿದರು.
ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತದಿಂದ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗೆ ತೆರಳುವ ಮತದಾರರ ಮೊಬೈಲ್ ಪೋನ್‍ಗಳನ್ನು ಮತಗಟ್ಟೆ ಹೊರಗೆ ಇರಿಸಲಾಯಿತು.
ಬೆಳಿಗ್ಗೆ 10 ಗಂಟೆ ಸುಮಾರಿಗೆ ಪದವೀಧರ ಕ್ಷೇತ್ರದಲ್ಲಿ ಪುರುಷರು 2297, ಮಹಿಳೆಯರು 580 ಸೇರಿ ಒಟ್ಟು 2877 ಜನ ಮತ ಚಲಾಯಿಸುವ ಮೂಲಕ ಶೇ.8.55 ರಷ್ಟು ಮತದಾನವಾದರೆ, ಶಿಕ್ಷಕರ ಮತಕ್ಷೇತ್ರದಿಂದ ಪುರುಷರು 404, ಮಹಿಳೆಯರು ಸೇರಿ 495 ಜನ ಮತ ಚಲಾಯಿಸಿ ಶೇ.9.57 ರಷ್ಟು ಮತದಾನವಾದರೆ, 12 ಗಂಟೆಗೆ ಪದವೀಧರ ಕ್ಷೇತ್ರಕ್ಕೆ ಶೇ.23.69 ರಷ್ಟು, ಶಿಕ್ಷಕರ ಮತಕ್ಷೇತ್ರಕ್ಕೆ ಶೇ.32.23 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 2 ಗಂಟೆಗೆ ಪದವೀಧಕರ ಕ್ಷೇತ್ರದಲ್ಲಿ ಶೇ.40.47, ಶಿಕ್ಷಕರ ಮತಕ್ಷೇತ್ರದಲ್ಲಿ ಶೇ.95.35, 4 ಗಂಟೆಗೆ ಪದವೀಧರ ಕ್ಷೇತ್ರಕ್ಕೆ ಶೇ.56.70 ಹಾಗೂ ಶಿಕ್ಷಕರ ಮತಕ್ಷೇತ್ರಕ್ಕೆ ಶೇ.77.05 ರಷ್ಟು ಮತದಾನವಾಗಿರುವುದು ಕಂಡುಬಂದಿತು.