25 ರಂದು ಕಲಾದಗಿ ಗ್ರಾಮದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ತೇರದಾಳ ಮತಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಫೆಬ್ರವರಿ 26 ರಂದು ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಮುಖ್ಯಮಂತ್ರಿಗಳ ಕಾರ್ಯಕ್ರಮಗಳ ಪೂರ್ವ ಸಿದ್ದತೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಫೆ.26 ರಂದು ಬನಹಟ್ಟಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಹಿಪ್ಪರಗಿ ಗ್ರಾಮದ ಸಂಗಮೇಶ್ವರ ದೇವಸ್ಥಾನಕ್ಕೆ ಭೇಟಿ, ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ, ಕುಲಹಳ್ಳಿ-ಹುನ್ನೂರ ಹಾಗೂ ವೆಂಕಟೇಶ್ವರ ಏತ ನೀರಾವರಿ ಯೋಜನೆಯ ಚಾಕವೆಲ್‍ಗಳ ಉದ್ಘಾಟನೆ, ಸಸಾಲಟ್ಟಿ ಶ್ರೀ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ಬನಹಟ್ಟಿಯ ಎಸ್.ಆರ್.ಎ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾರ್ಯಕ್ರಮಗಳ ಸಿದ್ದತೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಮಖಂಡಿ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಭೆ ನಡೆಸಿ, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕೆಲಸದ ಜವಾಬ್ದಾರಿಗಳನ್ನು ವಹಿಸಿಕೊಡಲು ತಿಳಿಸಿದರು.
ಕಂದಾಯ ಸಚಿವರ ಗ್ರಾಮ ವಾಸ್ತವ್ಯ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಫೆ.25 ರಂದು ಬೀಳಗಿ ಮತಕ್ಷೇತ್ರದ ತಾಲೂಕಿನ ಕಲಾದಗಿ ಗ್ರಾಮದಲ್ಲಿ ಕಂದಾಯ ಸಚಿವರಾದ ಆರ್.ಅಶೋಕ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಮೆರವಣಿಗೆ, ವೇದಿಕೆ ಕಾರ್ಯಕ್ರಮ, ಗ್ರಾಮ ಸಭೆ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ 6 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿವಿಧ ಇಲಾಖೆಯ ಯೋಜನೆಗಳ ಸೌಲಭ್ಯಗಳನ್ನು ವಿತರಿಸಲಿದ್ದಾರೆ ಎಂದರು.
ಫಲಾನುಭವಿಗಳ ಪಟ್ಟಿ ಸಿದ್ದಪಡಿಸುವ ನಿಟ್ಟಿನಲ್ಲಿ ಆಯಾ ತಾಲೂಕಿನ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಹಶೀಲ್ದಾರರನ್ನು ಮೇಲುಸ್ತುವಾರಿಯಾಗಿ ನೇಮಿಸಲಾಗುತ್ತಿದ್ದು, ಆಯಾ ತಾಲೂಕಿನ ವಿವಿಧ ಇಲಾಖೆಯ ಫಲಾನುಭವಿಗಳ ಮಾಹಿತಿಯನ್ನು ಪಡೆದು ಪಟ್ಟಿ ಸಿದ್ದಪಡಿಸಿಕೊಂಡು ಕಾರ್ಯಕ್ರಮಕ್ಕೆ ಕರೆತರಲು ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಫಲಾನುಭವಿಗಳ ಪಟ್ಟಿನ್ನು ಸಿದ್ದಪಡಿಸಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸಚಿವರು ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದು, ವಾಸ್ತವ್ಯಕ್ಕೆ ಹತ್ತಿರದ ಸರಕಾರಿ ವಸತಿ ಶಾಲೆಯನ್ನು ಗುರುತಿಸಿ ಎಲ್ಲ ರೀತಿಯ ವ್ಯವಸ್ಥೆ ಮಾಡಲು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಯುಕೆಪಿಯ ಮಹಾ ವ್ಯವಸ್ಥಾಪಕ ಭಾನುವರ್‍ಸಿಂಗ್ ಮೀನಾ, ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕುಲಗೌಡ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ ಅಮರೇಶ ಪಮ್ಮಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ ಹಾಗೂ ಇತರರು ಉಪಸ್ಥಿತರಿದ್ದರು.