ಬಿಜೆಪಿಯ ಚುನಾವಣಾ ಸಮಯದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಹಲವು ದಶಕಗಳಿಂದ ಸೇರಿ ಹೋಗಿದ್ದು, ಮಂದಿರ್ ವಹೀ ಬನೇಗಾ ಅನ್ನೋ ಘೋಷ ವಾಕ್ಯ ಪದೇ ಪದೇ ಕೇಳಿ ಬರ್ತಿತ್ತು. ಇದೀಗ ಮಂದಿರ ನಿರ್ಮಾಣವಾಗಿದೆ.. ದೇಶದ ಜನ ಬಿಜೆಪಿಗೆ ಮತ್ತೊಂದು ಅವಧಿಗೆ ಅಧಿಕಾರ ಏಕೆ ನೀಡಬೇಕು? ತನ್ನ ಪ್ರಣಾಳಿಕೆಯಲ್ಲಿ ದೇಶದ ಜನರ ಮುಂದಿಡಲು ಬಿಜೆಪಿ ಬತ್ತಳಿಕೆಯಲ್ಲಿ ಇರುವ ಅಸ್ತ್ರಗಳು ಏನು? ಪ್ರಶ್ನೆಯೂ ಇದೆ.
2024ರ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ತನ್ನ ಬಹುಕಾಲದ ಆಶ್ವಾಸನೆ ಈಡೇರಿಸಿರುವ ಬಿಜೆಪಿ, ಈ ಬಾರಿಯೂ ಗೆಲುವು ನನ್ನದೇ ಅನ್ನೋ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗಿಂತಲೂ ಭಿನ್ನವಾದ ವೋಟ್ ಬ್ಯಾಂಕ್ ಒಂದು ಬಿಜೆಪಿ ಬೆನ್ನಿಗಿದೆ ಅನ್ನೋ ವಾದವೂ ಇದೆ. ಯಾವುದು ಆ ವೋಟ್ ಬ್ಯಾಂಕ್? ಮಂದಿರದ ನಂತರ ಬಿಜೆಪಿಯ ಹೊಸ ಆಶ್ವಾಸನೆ ಏನಿರಬಹುದು?
ಬಿಜೆಪಿ ಹಿಂದುತ್ವವಾದಿ ರಾಜಕಾರಣ ಮಾಡುತ್ತೆ, ಹಿಂದುತ್ವದ ಕಾರಣಕ್ಕೆ ಬಿಜೆಪಿ ಬೆನ್ನಿಗೆ ಹಿಂದೂ ಮತ ಬ್ಯಾಂಕ್ ಇದೆ ಅನ್ನೋ ವಾದಗಳ ನಡುವಲ್ಲೇ ಹೊಸತೊಂದು ವಾದ ಸರಣಿ ಕೇಳಿ ಬಂದಿದೆ. ಈ ವಾದ ಸರಣಿ ಮಂಡಿಸಿರೋದು ಉತ್ತರ ಪ್ರದೇಶದ ಅಲಹಾಬಾದ್‌ನ ಸಮಾಜ ವಿಜ್ಞಾನ ಸಂಸ್ಥೆಯ ನಿರ್ದೇಶಕ ಜಿ. ಬಿ. ಪಂತ್. ಮಾಧ್ಯಮ ಸಂಸ್ಥೆಯೊಂದಕ್ಕೆ ಸುದೀರ್ಘ ಲೇಖನ ಬರೆದಿರುವ ಪಂತ್ ಅವರು, ಬಿಜೆಪಿ ಬೆನ್ನಿಗೆ ನಿಲ್ಲಬಹುದಾದ ಹೊಸದೊಂದು ವೋಟ್ ಬ್ಯಾಂಕ್ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಳೆದ 10 ವರ್ಷಗಳಿಂದ ಮೋದಿ ಸರ್ಕಾರ ಗಳಿಸಿರುವ ವೋಟ್ ಬ್ಯಾಂಕ್ ಇದು.. ಈ ವೋಟ್ ಬ್ಯಾಂಕ್‌ನ ಹೆಸರು ಫಲಾನುಭವಿಗಳು..
ಮಹಿಳಾ ಆರ್ಥಿಕಾಭಿವೃದ್ದಿಗಾಗಿ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್, ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಪಿಎಂ ಪೋಷನ್ ಶಕ್ತಿ ನಿರ್ಮಾಣ ಅಭಿಯಾನ, ಗ್ರಾಮಿಣಾಭಿವೃದ್ದಿಗಾಗಿ ಸ್ವಾಮಿತ್ವ ಯೋಜನೆ, ಉದ್ಯೋಗಾಭಿವೃದ್ಧಿಗಾಗಿ ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನ, ಮೀನುಗಾರರಿಗಾಗಿ ಪಿಎಂ ಮತ್ಸ ಸಂಪದ ಯೋಜನೆ, ಕೃಷಿಕರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ, ಗ್ರಾಮೀಣಾಭಿವೃದ್ಧಿಗಾಗಿ ಜಲ್ ಜೀವನ್ ಮಿಷನ್.. ಹೀಗೆ ಹೇಳುತ್ತಾ ಹೋದರೆ ಯೋಜನೆಗಳ ಪಟ್ಟಿ ಬೃಹತ್ತಾಗಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಯೋಜನೆಗಳಲ್ಲಿ ದಲಿತರು, ಬುಡಕಟ್ಟು ಜನರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರನ್ನೂ ಫಲಾನುಭವಿಗಳಾಗಿ ಇರುವಂತೆ ನೋಡಿಕೊಳ್ಳಲಾಗಿದೆ.
ಕೃಷಿಕರು, ಮಹಿಳೆಯರು, ಯುವಕರು ಹಾಗೂ ಬಡವರು.. ಈ ನಾಲ್ಕು ವರ್ಗಗಳನ್ನು ಗುರಿಯಾಗಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಯೋಜನೆಗಳನ್ನ ರೂಪಿಸಿದೆ. ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯದ ಜೊತೆಯಲ್ಲೇ ಕುಶಲ ಕರ್ಮಿಗಳಿಗೆ ತಮ್ಮ ಉದ್ಯಮ ನಡೆಸಲು ನೆರವು ನೀಡುವವರೆಗೆ ಹಲವು ರೀತಿಯ ಯೋಜನೆಗಳನ್ನ ಮೋದಿ ಸರ್ಕಾರ ರೂಪಿಸಿದೆ. ಈ ಎಲ್ಲಾ ಯೋಜನೆಗಳ ಫಲಾನುಭವಿಗಳು ನೇರವಾಗಿ ಮೋದಿ ಸರ್ಕಾರದ ಮತ ಬ್ಯಾಂಕ್ ಆಗಬಹುದು ಅನ್ನೋ ಬಿಜೆಪಿ ವಿಶ್ವಾಸ..