ನವದೆಹಲಿ,: ಜನವರಿ 31ರಂದು ಬಜೆಟ್ ಅಧಿವೇಶನ ಶುರುವಾಗಲಿದ್ದು, ಅದಕ್ಕೆ ಒಂದು ದಿನ ಮುನ್ನ, ಜನವರಿ 30ರಂದು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ಪ್ರತೀ ಬಜೆಟ್ ಅಧಿವೇಶನಕ್ಕೆ ಮುನ್ನ ಈ ರೀತಿ ಎಲ್ಲಾ ಪಕ್ಷಗಳ ಸಭೆ ನಡೆಯುವುದು ವಾಡಿಕೆಯಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಫೆಬ್ರುವರಿ 1ರಂದು ಮಂಡನೆಯಾಗಲಿರುವುದು ಮಧ್ಯಂತರ ಬಜೆಟ್ ಆಗಿರಲಿದೆ.
ಜನವರಿ 31ರಂದು ಆರಂಭವಾಗುವ ಬಜೆಟ್ ಅಧಿವೇಶನ ಫೆಬ್ರುವರಿ 9ರವರೆಗೆ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 31ರಂದು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಬಜೆಟ್ ಅಧಿವೇಶನಕ್ಕೆ ಚಾಲನೆ ಸಿಗಲಿದೆ.ಫೆಬ್ರುವರಿ 1ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಾದ ಬಳಿಕ ಬಜೆಟ್ ಬಗ್ಗೆ ಅಧಿವೇಶನದಲ್ಲಿ ಚರ್ಚೆಗಳು ನಡೆಯಲು ಅವಕಾಶ ಇರುತ್ತದೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸತತ ಎರಡು ಅವಧಿ ಅಧಿಕಾರದಲ್ಲಿದೆ. ಮೊದಲ ಅವಧಿಯಲ್ಲಿ ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದರು. ಎರಡನೇ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್ ಫೈನಾನ್ಸ್ ಮಿನಿಸ್ಟರ್ ಆಗಿದ್ದಾರೆ. ಇಂದಿರಾ ಗಾಂಧಿ ಬಳಿಕ ಬಜೆಟ್ ಮಂಡಿಸಿದ ಮಹಿಳೆ ಎಂಬ ಖ್ಯಾತಿ ನಿರ್ಮಲಾ ಸೀತಾರಾಮನ್ ಅವರದ್ದಾಗಿದೆ. ಅಷ್ಟೇ ಅಲ್ಲ, ಅವರು ಫೆಬ್ರುವರಿ 1ರದ್ದೂ ಸೇರಿಸಿದರೆ ನಿರ್ಮಲಾ ಸೀತಾರಾಮನ್ ಐದು ಬಜೆಟ್ ಮಂಡಿಸಿದಂತಾಗುತ್ತದೆ.
ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕ ಜುಲೈ ತಿಂಗಳಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದ್ದು, ಅಲ್ಲಿಯವರೆಗೆ ಸರ್ಕಾರದ ನಿರ್ವಹಣೆಗೆ ಬೇಕಾದ ಹಣಕಾಸು ಸಂಪನ್ಮೂಲ ಬಳಕೆಗೆ ಅವಕಾಶವನ್ನು ಲೇಖಾನುದಾನದ ಮೂಲಕ ನೀಡಲಾಗುತ್ತದೆ. ಹೀಗಾಗಿ, ಫೆಬ್ರುವರಿ 1ರಂದು ಮಂಡನೆಯಾಗುವ ಮಧ್ಯಂತರ ಬಜೆಟ್ನಿಂದ ದೊಡ್ಡ ನಿರೀಕ್ಷೆಗಳು ಇಲ್ಲ.