ವಿಶ್ವದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ವರ್ಷದ ಬಜೆಟ್ ಮಂಡನೆಯಾಗಿದ್ದು, ಬರೋಬ್ಬರಿ 5,142 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ 2024-25ರ ವಾರ್ಷಿಕ ಬಜೆಟ್ ಅನ್ನು ಅನುಮೋದಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ದೇವಸ್ಥಾನವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಬಜೆಟ್ ಅನ್ನು ಮಂಡಿಸಿದ್ದು, 1933ರಲ್ಲಿ ದೇವಾಲಯದ ಟ್ರಸ್ಟ್ ಆರಂಭವಾದ ಬಳಿಕ ಇದೇ ಅತಿ ಹೆಚ್ಚಿನ ಬಜೆಟ್ ಅಂದಾಜು ಆಗಿದ್ದು, ಕೊರೊನಾ ಸಾಂಕ್ರಾಮಿಕದ ಬಳಿಕ ತಿರುಪತಿ ದೇವಸ್ಥಾನದ ಹುಂಡಿಯ ಆದಾಯವು ಅಚ್ಚರಿಯ ರೀತಿಯಲ್ಲಿ ಹೆಚ್ಚಾಗಿದೆ. ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ಟಿಟಿಡಿ ಮಂಡಳಿಯ ನಿರ್ಣಯಗಳನ್ನು ವಿವರಿಸಿದರು.
ಟಿಟಿಡಿ ನೌಕರರ ವಸತಿ ಪ್ರದೇಶಗಳಲ್ಲಿ ಜಲ್ಲಿಕಲ್ಲು ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಲಡ್ಡೂ ತಟ್ಟೆ ಕಾರ್ಮಿಕರಿಗೆ ಹೆಚ್ಚುವರಿಯಾಗಿ 15 ಸಾವಿರ ವೇತನ ಹೆಚ್ಚಳದ ಜತೆಗೆ ವೇದ ಶಾಲೆಗಳ 51 ಶಿಕ್ಷಕರ ವೇತನವನ್ನು 34,000ದಿಂದ 54,000ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಟಿಟಿಡಿ ಅಧೀನದಲ್ಲಿ ನಡೆಯುತ್ತಿರುವ 60 ದೇವಸ್ಥಾನಗಳಲ್ಲಿ ಹೊಸ ಹುದ್ದೆಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತಿದೆ ಎಂದರು.
ಸ್ವಿಮ್ಸ್ ಆಸ್ಪತ್ರೆಯನ್ನು 300 ಹಾಸಿಗೆಗಳಿಂದ 1200 ಹಾಸಿಗೆಗಳಿಗೆ ವಿಸ್ತರಿಸಲು 148 ಕೋಟಿ ರೂಪಾಯಿಗಳ ಟೆಂಡರ್ ಅನ್ನು ಟಿಟಿಡಿ ಮಂಡಳಿಯು ಅನುಮೋದಿಸಿದೆ.ಅನ್ನಮಯ್ಯ ಭವನದ ಆಧುನೀಕರಣಕ್ಕೆ ಟಿಟಿಡಿ ಮಂಡಳಿ 47 ಸಾವಿರ ಕೋಟಿ ರೂ. ಸಪ್ತಗಿರಿ ಸತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ 1.5 ಕೋಟಿ.. ಎಸ್‌ಎಂಸಿ ಜತೆಗೆ ಹಲವು ಕಾಟೇಜ್‌ಗಳ ಆಧುನೀಕರಣಕ್ಕೆ 10 ಕೋಟಿ. ಟಿಟಿಡಿಯಲ್ಲಿ ಒರಾಕಲ್ ಫ್ಯೂಷನ್ ಕ್ಲೌಡ್ ಸಾಫ್ಟ್‌ವೇರ್ ಬಳಕೆಯನ್ನು ಸಹ ಅನುಮೋದಿಸಲಾಗಿದೆ. 1,611 ಕೋಟಿ ರೂಪಾಯಿ ಭಕ್ತರ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಕಳೆದ ವರ್ಷವೂ ವಿಶ್ವವಿಖ್ಯಾತ ದೇವಾಲಯಕ್ಕೆ ಇದೇ ರೀತಿಯ ಕೊಡುಗೆಗಳು ಬಂದಿದ್ದವು.