ಬೆಂಗಳೂರು: ರಾಷ್ಟ್ರಧ್ವಜ, ಕನ್ನಡ ಧ್ವಜ ಬೇಡ ಎಂದು ಒಂದಷ್ಟು ಜನ ಹೊಸದಾಗಿ ಕೇಸರಿ ಧ್ವಜ ಹಿಡಿಯಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧಿ ಪುಣ್ಯ ಸ್ಮರಣೆ ಹಾಗೂ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಮಂಡ್ಯದಲ್ಲಿ ಕೇಸರಿ ಧ್ವಜದ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ರಾಷ್ಟ್ರಧ್ವಜ, ಕನ್ನಡ ಧ್ವಜ ಬೇಡ ಎಂದು ಹೊಸ ಧ್ವಜ ಹಿಡಿಯುತ್ತಿದ್ದು, ಅವರು ತಮ್ಮ ಮನೆಗಳ ಮೇಲೆ ತಮಗೆ ಬೇಕಾದ ಧ್ವಜ ಹಾಕಿಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ ಎಂದರು.
ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇರುವ ರಾಷ್ಟ್ರಧ್ವಜ, ಕನ್ನಡಧ್ವಜ ಹಾರಿಸಬೇಕು ಅಲ್ಲವೇ? ಎಂದು ಪ್ರಶ್ನಿಸಿದರು.ಗಾಂಧೀಜಿ ಅವರು ನಮಗೆ ಶಾಂತಿಯ ಮಾರ್ಗದರ್ಶನ ಕೊಟ್ಟಿದ್ದಾರೆ. ಆದರೆ ಕೆಲವರು ರಾಜಕೀಯಕ್ಕಾಗಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಗಾಂಧಿಯವರು ಹುತಾತ್ಮರಾಗಿ 76 ವರ್ಷಗಳಾದರೂ ಅವರು ತಮ್ಮ ಚಿಂತನೆಗಳಿಂದ ಜೀವಂತವಾಗಿದ್ದಾರೆ. ಪ್ರಪಂಚದ ಪ್ರಮುಖ ನಾಯಕರು ಮತ್ತು ಎಲ್ಲಾ ದೇಶಗಳು ಗಾಂಧಿಯವರ ಅಹಿಂಸೆಯ ಮತ್ತು ಶಾಂತಿಯ ಸೂತ್ರವನ್ನು ಒಪ್ಪಿವೆ. ಕಾಂಗ್ರೆಸ್ ಕಾರ್ಯಕರ್ತರು ಗಾಂಧಿಯ ಕುಟುಂಬದವರು ಎಂದರು.
ನಮಗೆ ಶಾಂತಿಯೇ ಮಂತ್ರ. ಆದರೆ ಶಾಂತಿಯನ್ನು ಕದಡಲು ಬಿಜೆಪಿ- ಜನತಾದಳದವರು ಕೂಡಿ ಹೊರಟಿದ್ದಾರೆ. ಈ ಇಬ್ಬರೂ ಕಪಟ ನಾಟಕದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು.