ನವದೆಹಲಿ: ಚುನಾವಣೆಯಲ್ಲಿ ಪ್ರಚಾರಕ್ಕೆ ಯಾವುದೇ ರೀತಿಯಲ್ಲಿಯೂ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೋಮವಾರ ಖಡಕ್ ಸೂಚನೆ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.
2024ರ ಲೋಕಸಭೆ ಚುನಾವಣೆಗೆ ಮುನ್ನ ಆಯೋಗ ಈ ಸುತ್ತೋಲೆ ಹೊರಡಿಸಿದ್ದು, ಭಿತ್ತಿಪತ್ರಗಳು, ಕರಪತ್ರಗಳ ಹಂಚುವಿಕೆ ಅಥವಾ ಘೋಷಣೆಗಳನ್ನು ಕೂಗಲು ಮಕ್ಕಳನ್ನು ಬಳಸಬಾರದು ಎಂದು ರಾಜಕೀಯ ಪಕ್ಷಗಳಿಗೆ ಕಟ್ಟಪ್ಪಣೆ ಮಾಡಿದ್ದು, ರಾಜಕೀಯ ಪಕ್ಷಗಳಿಗೆ ಕಳುಹಿಸಿದ ಪ್ರಮುಖ ಸಲಹೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸಬಾರದು.
ಈ ವಿಷಯವನ್ನು ಯಾವುದೇ ಕಾರಣಕ್ಕೂ ಚುನಾವಣಾ ಆಯೋಗವು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದು, ಮಕ್ಕಳ ಬಗ್ಗೆ ತಾನು ‘ಶೂನ್ಯ ಸಹಿಷ್ಣುತೆ’ ನೀತಿ ಹೊಂದಿರುವುದಾಗಿ ಆಯೋಗ ಹೇಳಿದೆ.ಚುನಾವಣಾ ಪ್ರಚಾರದ ವೇಳೆ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಮಗುವನ್ನು ಎತ್ತಿ ಹಿಡಿಯುವಂತಿಲ್ಲ.
ಅಲ್ಲದೆ ಮಗುವನ್ನು ವಾಹನದಲ್ಲಿ ಕುಳ್ಳಿರಿಸಿಕೊಂಡು ಹೋಗುವುದು ಅಥವಾ ರ್ಯಾಲಿಗಳಲ್ಲಿ ಕರೆದೊಯ್ಯುವುದು, ಹೀಗೆ ಯಾವುದೇ ರೀತಿಯಲ್ಲಿ ಪ್ರಚಾರ ಕಾರ್ಯಗಳಿಗೆ ಮಕ್ಕಳನ್ನು ಬಳಸಬಾರದು ಎಂದು ಚುನಾವಣಾ ಆಯೋಗವು ಖಡಕ್ ಎಚ್ಚರಿಕೆಯನ್ನು ನೀಡಿದೆ.