ಎರಡ್ಮೂರು ತಿಂಗಳ ಹಿಂದೆ 100 ರೂಪಾಯಿಗೆ ಕೆಜಿ ಮಾರುವ ಮೂಲಕ ದಾಖಲೆ ಬರೆದಿದ್ದ ಈರುಳ್ಳಿ ದರ ಸಂಪೂರ್ಣ ನೆಲಕಚ್ಚಿದ್ದು, ಈರುಳ್ಳಿ ಬೆಳೆದ ರೈತರು ಅಕ್ಷರಶಃ ಕಂಗಾಲಾಗುವಂತಾಗಿದೆ. ತಿಂಗಳ ಹಿಂದೆ ಕನಿಷ್ಠ 3000 ದಿಂದ ನಾಲ್ಕು ಸಾವಿರ ರೂ ಕ್ವಿಂಟಾಲ್ ಮಾರಾಟ ಕಂಡಿದ್ದ ಈರುಳ್ಳಿ, ಇದೀಗ 1000 ರೂಗೆ ಮಾರಾಟ ಕಾಣುವುದು ದುಸ್ತರವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಎಕರೆ ಈರುಳ್ಳಿ ಬೆಳೆಯಲು ಕನಿಷ್ಠ 15ರಿಂದ 20 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಮಾರುಕಟ್ಟೆ ಸಾಗಣೆ ದರ ಬೇರೆ. ಇದೆಲ್ಲ ಕಳೆದರೆ ಈ ಬಾರಿ ಎಕರೆಗೆ ಸಾವಿರ ರೂಪಾಯಿ ಲಾಭ ಬರುವುದು ಡೌಟು ಎನ್ನುತ್ತಾರೆ ರೈತರು. ಬಗ್ಗೆ ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯಿಸಿರುವ ಚಿಂಚೋಳಿಯ ರೈತ ರೇವಣಸಿದ್ದಪ್ಪ, ಮೂರ್ನಾಲ್ಕು ತಿಂಗಳ ಹಿಂದೆ ಉಳ್ಳಾಗಡ್ಡಿ ದರ ಜಾಸ್ತಿ ಇತ್ತು.
ಇದೀಗ ಬಹಳಷ್ಟು ಕಡಿಮೆಯಾಗಿದೆ. ಬೇರೆ ರೈತರ ನೆರವಿಗೆ ಬರುವ ಸರಕಾರ ಉಳ್ಳಾಗಡ್ಡಿ ಬೆಳೆದ ರೈತರ ನೆರವಿಗೂ ಬರಬೇಕು ಎಂದಿದ್ದಾರೆ.ಸರಕಾರ ನಿಗದಿತ ಸಮಯ ಕರೆಂಟ್ ನೀಡದೆ ಸತಾಯಿಸುತ್ತಿತ್ತು. ಈರುಳ್ಳಿ ಬೆಳೆಗೆ ನೀರು ಸಾಲುತ್ತಿಲ್ಲ ಎಂದು ಹಲವು ಬಾರಿ ಹೋರಾಟ ಮಾಡಲಾಗಿದ್ದು, ಇದರ ನಿಮಿತ್ತ ನಿತ್ಯ ಏಳು ಗಂಟೆ ಎಂದ ಸರಕಾರ 5 ಗಂಟೆಯಷ್ಟು ತ್ರಿ ಫೇಸ್ ವಿದ್ಯುತ್ ನೀಡಿತು.
ಮಾರುಕಟ್ಟೆಯಲ್ಲಿಸಣ್ಣ ಗಾತ್ರದ ಈರುಳ್ಳಿ ಕೆಜಿಗೆ 10 ರೂ. ಮಾರಾಟವಾದರೆ, ಮಧ್ಯಮ ಮತ್ತು ದೊಡ್ಡ ಗಾತ್ರದ ಈರುಳ್ಳಿ 15ರಿಂದ 20 ರೂಪಾಯಿ ಪ್ರತಿ ಕೆ.ಜಿ ವರೆಗೂ ಮಾರಾಟ ಕಾಣುತ್ತಿದೆ. ಆದರೆ, ರೈತರಿಗೆ ಮಾತ್ರ 10 ರೂಪಾಯಿಯೂ ಸಿಗದಂತಾಗಿದೆ. ಒಟ್ಟಾರೆ ಕೆಲವು ದಿನ ಈರುಳ್ಳಿ ಬೆಲೆ ಹೆಚ್ಚಾಗಿದ್ದುಮಾತ್ರ ಬಂತು. ಮಾರುಕಟ್ಟೆಗೆ ಭರಪೂರ ಬೆಳೆ ಬಂದಾಗ ಬೆಲೆ ನೆಲಕಚ್ಚುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಹೇಳಲಾಗುವುದು,