ಕೊಲ್ಕತ್ತಾ: ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಸೇರಿದಂತೆ ಹಲವು ನಾಯಕಿಯರನ್ನ ಸೆಕ್ಷನ್ 144 ಉಲ್ಲೇಖಿಸಿ ಆ ಪ್ರದೇಶಕ್ಕೆ ತೆರಳುತ್ತಿದ್ದಾಗ ಬಂಧನಕ್ಕೊಳಪಡಿಸಿದ್ದರಿಂದ ಶುಕ್ರವಾರ ಸಂದೇಶ್‌ಖಾಲಿಯಲ್ಲಿ ಹೊಸ ಗಲಾಟೆ ಭುಗಿಲೆದ್ದಿದ್ದು, ಭೂಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತೃಣಮೂಲದ ಪ್ರಬಲ ನಾಯಕ ಶೇಖ್ ಷಹಜಹಾನ್ ಮತ್ತು ಆತನ ಸಹಾಯಕರ ವಿರುದ್ಧ ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಸಂದೇಶ್‌ಖಾಲಿಯಲ್ಲಿ ನಿಷೇಧಾಜ್ಞೆ ಇರುವ ಕಾರಣ ಬಿಜೆಪಿ (BJP) ನಾಯಕರು ಅಲ್ಲಿಗೆ ಭೇಟಿ ನೀಡುವುದನ್ನು ಆಡಳಿತಾರೂಢ ಟಿಎಂಸಿ (TMC) ತಡೆಯುತ್ತಿದೆ.ಶುಕ್ರವಾರ ನಡೆದ ಈ ಗಲಾಟೆ ಬಗ್ಗೆ ಮಾತನಾಡಿದ ತೃಣಮೂಲ ನಾಯಕ ಕುನಾಲ್ ಘೋಷ್, ಸಂದೇಶ್‌ಖಾಲಿ ವಿಷಯವನ್ನು ಜ್ವಲಂತವಾಗಿಡಲು ಬಿಜೆಪಿ ಬಯಸುತ್ತೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಆಗಮಿಸುವವರೆಗೆ ಸಂದೇಶ್‌ಖಾಲಿ ಪರಿಹಾರ ಕಂಡುಕೊಳ್ಳಬಾರದು. ಅದಕ್ಕಾಗಿಯೇ ಪ್ರತಿದಿನ ಬಿಜೆಪಿ ನಾಯಕರು ಸಂದೇಶ್‌ಖಾಲಿಗೆ ಭೇಟಿ ನೀಡಲು ಸಾಲುಗಟ್ಟಿ ನಿಂತಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಕಾರ್ಯಕ್ರಮದ ಭಾಗವಾಗಿ ಮಾರ್ಚ್ 1 ಮತ್ತು 2 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಮಾರ್ಚ್ 6 ರಂದು ಉತ್ತರ 24 ಪರಗಣದಲ್ಲಿ ಮಹಿಳಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಂದೇಶ್‌ಖಾಲಿ ಉತ್ತರ 24 ಪರಗಣದಲ್ಲಿದೆ.ಲಾಕೆಟ್ ಚಟರ್ಜಿ ತನ್ನ ಕ್ಷೇತ್ರಕ್ಕೆ ಹೋಗದೆ ಸಂಸಂದೇಶ್‌ಖಾಲಿಗೆ ಫೋಟೋಶೂಟ್ ಮಾಡಲು ಹೋಗುತ್ತಾರೆ. ಹಾಗಾಗಿ ಅವರು ಪ್ರತಿದಿನ ಹೋಗಿ ಜನರನ್ನು ಪ್ರಚೋದಿಸಿ ಅಲ್ಲಿ ನಾಟಕ ಮಾಡುತ್ತಾರೆ ”ಎಂದು ಕುನಾಲ್ ಘೋಷ್ ಹೇಳಿದರು.
ಶುಕ್ರವಾರ ಸಂದೇಶ್‌ಖಾಲಿಗೆ ತೆರಳುತ್ತಿದ್ದ ಮಹಿಳಾ ತಂಡದಲ್ಲಿ ಸಂಸದೆ ಲಾಕೆಟ್ ಚಟರ್ಜಿ, ಶಾಸಕ ಅಗ್ನಿಮಿತ್ರ ಪಾಲ್, ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಧುಚಂದ್ರ ಕರ್, ಉಪಾಧ್ಯಕ್ಷೆ, ವಕೀಲ ಪ್ರಿಯಾಂಕಾ ತಿಬ್ರೆವಾಲ್, ರಾಜ್ಯ ಕಾರ್ಯದರ್ಶಿ ಸೋನಾಲಿ ಮುರ್ಮು, ಫಲ್ಗುಣಿ ಪಾತ್ರ ಮತ್ತು ಪರೋಮಿತಾ ದತ್ತಾ ಇದ್ದರು.
ಪಶ್ಚಿಮ ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಶುಕ್ರವಾರ ಸಂದೇಶ್‌ಖಾಲಿಯಲ್ಲಿದ್ದರು. ಕೆಲವು ಭಾಗಗಳಲ್ಲಿ ಷಹಜಾನ್ ವಿರುದ್ಧ ಹೊಸ ಪ್ರತಿಭಟನೆಗಳು ಪ್ರಾರಂಭವಾಗಿವೆ. ಇಬ್ಬರು ಟಿಎಂಸಿ ನಾಯಕರು ಮತ್ತು ಶಹಜಹಾನ್ ಅವರ ಆಪ್ತ ಸಹಾಯಕ ಸೇರಿದಂತೆ ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 18 ಜನರನ್ನು ಬಂಧಿಸಿದ್ದಾರೆ.