ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅಮುಲ್‌ನ ಬನಸ್ ಕಾಶಿ ಸಂಕುಲ್ ಹಾಲು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು ಎಂದು ಮಾಹಿತಿ ತಿಳಿದು ಬಂದಿದೆ.
ವಾರಣಾಸಿಯಲ್ಲಿರುವ ಅಮುಲ್‌ನ ಅತಿದೊಡ್ಡ ಘಟಕವಾಗಿದೆ. ಬನಸ್ ಕಾಶಿ ಸಂಕುಲ್ ಬನಸ್ಕಾಂತ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್‌ನ ಹಾಲು ಸಂಸ್ಕರಣಾ ಘಟಕವಾಗಿದ್ದು, ಇದನ್ನು ವಾರಣಾಸಿಯ ಕಾರ್ಖಿಯೋನ್‌ನ UPSIDA ಆಗ್ರೋ ಪಾರ್ಕ್‌ನಲ್ಲಿ ನಿರ್ಮಿಸಲಾಗಿದ್ದು, 2021ರ ಡಿಸೆಂಬರ್‌ನಲ್ಲಿ ಪ್ರಧಾನಿಯವರು ಈ ಯೋಜನೆಯ ಅಡಿಗಲ್ಲು ಹಾಕಿದ್ದರು.
ದಿನಕ್ಕೆ 10 ಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಈ ಘಟಕವು ಹಾಲು, ಐಸ್ ಕ್ರೀಮ್, ಚೀಸ್, ಖೋವಾ, ತುಪ್ಪ ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಘಟಕವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಕೃತಕ ಗರ್ಭಧಾರಣೆ, ಭ್ರೂಣ ಕಸಿ ಮತ್ತು ಉತ್ತಮ ತಳಿಯ ಪ್ರಾಣಿಗಳಿಗೆ ಆಂಬ್ಯುಲೆನ್ಸ್ ಸೌಲಭ್ಯಗಳನ್ನು ಹೊಂದಿದೆ.
ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅಲ್ಲಿನ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದು ಘಟಕದ ವಿವಿಧ ಪರಿಕರಗಳ ಕುರಿತು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು. 622 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಮುಲ್‌ನ ಅತಿದೊಡ್ಡ ಡೈರಿ ಘಟಕ ಇದಾಗಿದ್ದು ಬನಸ್ ಡೈರಿಯು ಪೂರ್ವಾಂಚಲ್‌ನಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುವ ನಿರೀಕ್ಷೆಯಿದೆ.