ಹೊಸದಿಲ್ಲಿ: ”ಬಿಜೆಪಿ ಹಾಗೂ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರ ಅಡ್ಡಗಾಲಿನ ನಡುವೆಯೂ ಯಶಸ್ವಿಯಾಗಿ ಸರಕಾರ ಮುನ್ನಡೆಸುತ್ತಿರುವ ನನಗೆ ನೊಬೆಲ್ ಪ್ರಶಸ್ತಿ ಕೊಡಬೇಕು,” ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಗಿ ತಿಳಿಸಿದರು.
ಈ ಮೂಲಕ ಅವರು ಕೇಂದ್ರದ ಬಿಜೆಪಿ ಸರಕಾರಕ್ಕೆ ಟಾಂಗ್ ನೀಡಿದ್ದಾರೆ.ದಿಲ್ಲಿಯ ಕಾರ‍್ಯಕ್ರಮವೊಂದರಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಂಚಾಲಕ ಕೇಜ್ರಿವಾಲ್, ”ಕೇಂದ್ರದ ಅಸಹಕಾರದ ಮಧ್ಯೆಯೂ ನಮ್ಮ ಸರಕಾರ ರಾಷ್ಟ್ರ ರಾಜಧಾನಿಯಲ್ಲಿ ಅತ್ಯುತ್ತಮ ಗುಣಮಟ್ಟದ ಸರಕಾರಿ ಶಾಲೆಗಳನ್ನು ತೆರೆದಿದ್ದು, ವಿಶ್ವದ ನಾನಾ ಕಡೆಯಿಂದ ಪ್ರತಿನಿಧಿಗಳು ಇಲ್ಲಿಗೆ ಭೇಟಿ ಕೊಟ್ಟು ಶಾಲೆಗಳ ಕುರಿತು ಅಧ್ಯಯನ ಮಾಡುತ್ತಿರುವುದು ನಮ್ಮ ಕಾರ್ಯಕ್ಕೆ ಸಂದ ಗೌರವವಾಗಿದೆ ಎಂದರು.
ಬಿಜೆಪಿಯವರಿಗೆ ಬಡಮಕ್ಕಳು ಉತ್ತಮ ಶಿಕ್ಷಣ ಪಡೆಯುವುದು ಬೇಕಿಲ್ಲ. ಇದಲ್ಲದೇ ಆಸ್ಪತ್ರೆಗಳ ನಿರ್ಮಾಣಕ್ಕೂ ಕೇಂದ್ರ ಸರಕಾರ ಅಡ್ಡಿಪಡಿಸಿತು. ಅಬಕಾರಿ ನೀತಿ ಹಗರಣ ನೆಪಮಾಡಿಕೊಂಡು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದು, ಇವೆಲ್ಲದರ ಮಧ್ಯೆಯೂ ನಮ್ಮ ಸರಕಾರ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ” ಎಂದು ಹೇಳಿದರು.
ದಿಲ್ಲಿಯಲ್ಲಿ ಸರ್ಕಾರವನ್ನು ಹೇಗೆ ನಡೆಸುತ್ತಿದ್ದೇನೆ ಎನ್ನುವುದು ನನ್ನ ಹೃದಯಕ್ಕೆ ಮಾತ್ರ ಗೊತ್ತು. ಲೆಫ್ಟಿನೆಂಟ್ ಗವರ್ನರ್ ಜತೆಗೂಡಿ ಬಿಜೆಪಿ ರಾಜಧಾನಿಯ ಜನರಿಗೆ ತೊಂದರೆ ನೀಡುತ್ತಿರುವ ರೀತಿ ಹಾಗೂ ದಿಲ್ಲಿಯ ಜನರು ಎದುರಿಸುತ್ತಿರುವ ಈ ಎಲ್ಲಾ ಸಮಸ್ಯೆಗಳನ್ನು ನಾನು ನಿರಂತರವಾಗಿ ಪರಿಗಣಿಸಿ, ಪರಿಹರಿಸುತ್ತಿರುವ ರೀತಿಗೆ ನಾನು ನೊಬೆಲ್‌ಗೆ ಅರ್ಹನಿದ್ದೇನೆ” ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದರು.