ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ದೇಶದ ಯುವ ಜನತೆಗಾಗಿ 5 ಹೊಸ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಈ ಗ್ಯಾರಂಟಿಗಳು ಯುವ ಜನರ ಎಲ್ಲ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ಪಕ್ಷ ಹೇಳಿಕೊಂಡಿದೆ.
ಉದ್ಯೋಗ, ತರಬೇತಿ, ಹಣಕಾಸಿನ ನೆರವು ಸೇರಿದಂತೆ ಹಲವು ಅಂಶಗಳು ಈ 5 ಗ್ಯಾರಂಟಿಗಳಲ್ಲಿ ಅಡಕವಾಗಿದ್ದು, ಪದವೀಧರ ಹಾಗೂ ಡಿಪ್ಲಮೋ ವ್ಯಾಸಂಗ ಮಾಡಿದ ದೇಶದ ಪ್ರತಿಯೊಬ್ಬ ಯುವಕನಿಗೂ ಮೊದಲ ಕೆಲಸ ಗ್ಯಾರಂಟಿ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. 25 ವರ್ಷದ ಒಳಗಿನ ಪ್ರತಿಯೊಬ್ಬರಿಗೂ ಮೊದಲ ಕೆಲಸ ಸಿಕ್ಕೇ ಸಿಗಲಿದೆ. ಜೊತೆಯಲ್ಲೇ ವೃತ್ತಿ ಆಧಾರಿತ ತರಬೇತಿ ಸಿಗಲಿದೆ.
ತರಬೇತಿ ಅವಧಿಯಲ್ಲಿ ಇಡೀ ವರ್ಷ ಕಂತುಗಳಲ್ಲಿ 1 ಲಕ್ಷ ರೂಪಾಯಿ ಹಣ ಸಿಗಲಿದೆ ಎಂದು ಪಕ್ಷ ಹೇಳಿದೆ.ಇದೇ ವೇಳೆ ಕಾಂಗ್ರೆಸ್ ಪಕ್ಷ ದೇಶದ ಯುವಕರಿಗೆ ತಮ್ಮ ಉದ್ಯೋಗ ಅಥವಾ ಉದ್ದಿಮೆ ಆರಂಭಕ್ಕೆ ಶಿಷ್ಯ ವೃತ್ತಿ (ಅಪ್ರೆಂಟಿಸ್‌ಶಿಪ್) ಅವಕಾಶವನ್ನೂ ಕಲ್ಪಿಸೋದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆಯು ರಾಜಸ್ಥಾನ ರಾಜ್ಯದ ಬನ್ಸ್‌ವಾರಾ ತಲುಪಿದ್ದು, ಇಲ್ಲಿನ ಯುವಕರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುವ ವೇಳೆ ದೇಶದ ಯುವಕರಿಗಾಗಿ ತಮ್ಮ ಪಕ್ಷ ರೂಪಿಸಿರುವ ಯೋಜನೆಗಳನ್ನ ವಿವರಿಸಿದರು.
ಈ ‘ಶಿಷ್ಯ ವೃತ್ತಿ’ಯು ಕೇವಲ ಪದವೀಧರ ಅಥವಾ ಡಿಪ್ಲಮೋ ವ್ಯಾಸಂಗ ಮಾಡಿದವರಿಗೆ ಸಿಗಲಿದ್ದು, ಸರ್ಕಾರಿ ಕಚೇರಿ ಅಥವಾ ಖಾಸಗಿ ಕಚೇರಿಗಳಲ್ಲಿ ಸಿಗಲಿದೆ. ಶಿಷ್ಯ ವೃತ್ತಿಗೆ ಕಾನೂನು ಸ್ವರೂಪ ನೀಡೋದಾಗಿಯೂ ಹೇಳಿದ್ದು, ದೇಶದಲ್ಲಿ ಸದ್ಯ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಹೇಳಿರುವ ರಾಹುಲ್ ಗಾಂಧಿ, ಕೇಂದ್ರದಲ್ಲಿ ತಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಆದಷ್ಟೂ ಬೇಗ ಈ ಎಲ್ಲಾ 30 ಲಕ್ಷ ಸರ್ಕಾರಿ ನೌಕರಿಯ ಭರ್ತಿಗೆ ಆದ್ಯತೆ ನಿಡಲಾಗುವುದು ಎಂದು ತಿಳಿಸಿದರು.