ನವದೆಹಲಿ: ಭಿನ್ನಾಭಿಪ್ರಾಯದ ಹಕ್ಕನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಪ್ರತಿ ಟೀಕೆಯೂ ಅಪರಾಧವಲ್ಲ. ಅದನ್ನು ಅಪರಾಧ ಎಂದು ಭಾವಿಸಿದರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಗುರುವಾರ ಹೇಳಿರುವುದು ಬೆಳಕಿಗೆ ಬಂದಿದೆ.
ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪೊಲೀಸರು ಸೂಕ್ಷ್ಮತೆ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದಿರುವ ನ್ಯಾಯಾಲಯ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದರ ವಿರುದ್ಧ ಹೇಳಿಕೆ ನೀಡಿದ್ದ ವ್ಯಕ್ತಿಯೊಬ್ಬನ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದ್ದು, ಭಾರತೀಯ ಸಂವಿಧಾನವು 19 (1) ವಿಧಿ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಖಾತರಿ ನೀಡಿದ್ದು, ಈ ಖಾತರಿ ಅಡಿ, 370ನೇ ವಿಧಿಯನ್ನು ರದ್ದುಗೊಳಿಸಿರುವ ಕ್ರಮವನ್ನು ಅಥವಾ ಸರ್ಕಾರದ ಪ್ರತಿ ನಿರ್ಧಾರವನ್ನೂ ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ.
ಸರ್ಕಾರದ ನಿರ್ಧಾರ ತಮಗೆ ಅಸಂತೋಷ ಉಂಟುಮಾಡಿದೆ ಎಂದು ಹೇಳುವ ಹಕ್ಕು ಆತನಿಗೆ ಇದೆ” ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದ್ದು, ಸಂವಿಧಾನದ 19 (1) (a) ಅಡಿ ಖಚಿತಗೊಳಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಮತ್ತು ಅವುಗಳನ್ನು ಸಕಾರಣವಾಗಿ ನಿರ್ಬಂಧಿಸುವ ಮಿತಿಗಳ ಬಗ್ಗೆ ನಮ್ಮ ಪೊಲೀಸ್ ವ್ಯವಸ್ಥೆಗೆ ಶಿಕ್ಷಣ ನೀಡಬೇಕಾದ ಸಮಯವಿದು. ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅವರಲ್ಲಿ ಸಂವೇದನೆ ಮೂಡಬೇಕು” ಎಂದು ಪೀಠ ಹೇಳಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವ ಕಾಶ್ಮೀರ ಮೂಲದ ಜಾವೇದ್ ಅಹ್ಮದ್ ಹಜಂ ಅವರು ಆಗಸ್ಟ್ 5 ಅನ್ನು ‘ಜಮ್ಮು ಮತ್ತು ಕಾಶ್ಮೀರದ ಕರಾಳ ದಿನ’ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದರು. ಅಲ್ಲದೆ ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿದ್ದರು. ಈ ಕುರಿತಂತೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಈಗ ಆ ಪ್ರಕರಣವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಆಗಸ್ಟ್ 5ಅನ್ನು ಕರಾಳ ದಿನ ಎಂದು ಕರೆಯುವುದು ‘ಪ್ರತಿಭಟನೆ ಹಾಗೂ ನೋವು ವ್ಯಕ್ತಪಡಿಸುವ’ ವಿಧಾನವಾಗಿದೆ. ಪಾಕಿಸ್ತಾನದ ಜನತೆಗೆ ಸ್ವಾತಂತ್ರ್ಯ ದಿನದ ಶುಭ ಹಾರೈಸುವುದು ಸೌಹಾರ್ದ ನಡೆಯಾಗಿದೆ. ಇದನ್ನು ವೈರತ್ವ, ಹಗೆತನ, ದ್ವೇಷ ಅಥವಾ ವಿಭಿನ್ನ ಧಾರ್ಮಿಕ ಗುಂಪುಗಳ ನಡುವಿನ ಅನಾರೋಗ್ಯಕರ ಭಾವನೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.