ಬೆಂಗಳೂರು: ಇಡೀ ವಿಶ್ವವೇ ಮೆಚ್ಚಿರುವ ಮತ್ತು ಎಲ್ಲ ಕಾಲಘಟ್ಟಗಳಲ್ಲಿ ಪ್ರಸ್ತುತವೆನಿಸಿರುವ ಭಾರತದ ಸಂವಿಧಾನದ ಬಗ್ಗೆ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆಯಂಥವರು ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಒಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಗೌರವ ಮತ್ತು ಶ್ರದ್ಧೆಯಿಂದ ಮಾತಾಡುತ್ತಾರೆ. ಭಾರತದ ಉತ್ಕೃಷ್ಟ ಸಂವಿಧಾನದಿಂದಾಗೇ ತನಗೆ ಪ್ರಧಾನ ಮಂತ್ರಿಯಾಗುವ ಅವಕಾಶ ಸಿಕ್ಕಿತು ಎಂದು ಪ್ರಧಾನಿ ಹೇಳುತ್ತಾರೆ.
ಆದರೆ, ಹೆಗಡೆಯವರು ಸಂವಿಧಾನವನ್ನೇ ಬದಲಿಸುವ ಮಾತಾಡುತ್ತಾರೆ. ಅವರು ಹೇಳಿದ್ದು ವೈಯಕ್ತಿಕ ಅಂತ ಹೇಳಿ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳುವುದರಲ್ಲಿ ಅರ್ಥವಿಲ್ಲ, ಅವರ ಮುಂದೆ ಎರಡು ಆಪ್ಶನ್ ಗಳಿವೆ-ಒಂದೋ ಹೆಗಡೆಯವರನ್ನು ಪಕ್ಷದಿಂದ ಹೊರಹಾಕಬೇಕು ಇಲ್ಲವೇ ಅವರ ಮಾತುಗಳ ಮೇಲೆ ಕಡಿವಾಣ ಹೇರಬೇಕು ಎಂದು ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕನೊಬ್ಬ ಹೀಗೆ ಹೇಳಿದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತಿತ್ತು ಎಂದು ವಿವರಿಸಿದರು.