ಸೇಲಂ: ಇಂದು ಮಂಗಳವಾರ ತಮಿಳುನಾಡಿನ ಸೇಲಂನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಡಿಎಂಕೆ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಅವರ ಮೈತ್ರಿ ಎಂದರೆ ಭ್ರಷ್ಟಾಚಾರ ಮತ್ತು ಒಂದು ಕುಟುಂಬ ಆಡಳಿತ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ದೇಶವು 5G ತಂತ್ರಜ್ಞಾನವನ್ನು ತಲುಪಿತು. ಆದರೆ ತಮಿಳುನಾಡಿನಲ್ಲಿ ಡಿಎಂಕೆ ತನ್ನದೇ ಆದ 5ಜಿ ನಡೆಸುತ್ತಿದೆ. ತಮಿಳುನಾಡಿನ ಮೇಲೆ ನಿಯಂತ್ರಣ ಹೊಂದಲು ಒಂದು ಕುಟುಂಬದ ಐದನೇ ಪೀಳಿಗೆ ಇದೆ ಎಂಬುದನ್ನು ಸೂಚಿಸಲು ಮೋದಿ ಇಲ್ಲಿ 5ಜಿ ಎಂದು ಬಳಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
“ದಿವಂಗತ ಜಯಲಲಿತಾ ಅವರೊಂದಿಗೆ ಡಿಎಂಕೆ ಹೇಗೆ ವರ್ತಿಸಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಡಿಎಂಕೆಯ ನಿಜವಾದ ಮುಖ,” ಎಂದಿದ್ದಾರೆ ಮೋದಿ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಶಕ್ತಿ’ ಹೇಳಿಕೆ ಬಗ್ಗೆ ಇಂಡಿಯಾ ಬಣದ ಮೇಲೆ ವಾಗ್ದಾಳಿ ಮುಂದುವರಿಸಿದ ಪ್ರಧಾನಿ ಮೋದಿ, ಶಕ್ತಿಯನ್ನು ನಾಶಮಾಡಲು ಘೋಷಿಸುವ ಮೂಲಕ ವಿರೋಧ ಪಕ್ಷವು ತನ್ನ “ದುರುದ್ದೇಶ” ವನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಡಿಎಂಕೆ ಪ್ರಮುಖ ಘಟಕಗಳಾಗಿರುವ ವಿರೋಧ ಪಕ್ಷದ ಮೈತ್ರಿಯು ಪದೇ ಪದೇ ಹಿಂದೂ ಧರ್ಮವನ್ನು ಅವಮಾನಿಸುತ್ತದೆ. ಅವರ ಹೇಳಿಕೆಗಳು ಹಿಂದೂ ಧರ್ಮದ ವಿರೋಧಿಯೇ ಆಗಿರುತ್ತದೆ. ಇಂಡಿಯಾ ಮೈತ್ರಿಕೂಟದ ಜನರು ಪದೇ ಪದೇ ಉದ್ದೇಶಪೂರ್ವಕವಾಗಿ ಹಿಂದೂ ನಂಬಿಕೆಯನ್ನು ಅವಮಾನಿಸುತ್ತಾರೆ. ಅವರು ನೀಡುವ ಪ್ರತಿಯೊಂದು ಹೇಳಿಕೆಯೂ ಅದೇ ಉದ್ದೇಶದ್ದು. ಹಿಂದೂ ಧರ್ಮದಲ್ಲಿ, ಶಕ್ತಿ ಎಂದರೆ “ಮಾತೃ ಶಕ್ತಿ, ನಾರಿ ಶಕ್ತಿ” ಎಂದಿದ್ದಾರೆ ಪ್ರಧಾನಿ.
ತಮಿಳುನಾಡಿನ ಸೇಲಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ‘ನಾರಿ ಶಕ್ತಿ’ಯನ್ನು ಗೌರವಿಸುವ ಮೂಲಕ ವಯನಾಡ್ ಸಂಸದ ರಾಹುಲ್ ಗಾಂಧಿ ‘ಶಕ್ತಿ’ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಪ್ರಧಾನಮಂತ್ರಿಯವರೊಂದಿಗೆ ವೇದಿಕೆ ಹಂಚಿಕೊಳ್ಳಲು ಅಮ್ಮ ವೇಷಧಾರಿಗಳಾದ ಹೆಣ್ಮಕ್ಕಳನ್ನು ಕರೆಯಲಾಗಿದೆ. ಈ ಸಮಯದಲ್ಲಿ ಅವರೆಲ್ಲರೂ ಪ್ರಧಾನಿ ಮೋದಿಯವರೊಂದಿಗೆ ಸಂವಾದ ನಡೆಸಿದರು. ಸಾಂಪ್ರದಾಯಿಕ ಉಡುಗೆ ಧರಿಸಿದ ‘ಶಕ್ತಿ ಅಮ್ಮಾ’ಗಳು ಪ್ರಧಾನಮಂತ್ರಿಯವರೊಂದಿಗೆ ಫೋಟೊಗೆ ಪೋಸ್ ಕೂಡಾ ನೀಡಿದ್ದಾರೆ.