ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೆರೆರಾಷ್ಟ್ರ ಭೂತಾನ್ ಗೆ ನೀಡಿರುವ ಭೇಟಿ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿರುವುದು ನಿರ್ವಿವಾದಿತ. ಅದಕ್ಕೆ ಪ್ರತೀಕವಾಗಿ ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ’ ಪುರಸ್ಕಾರವನ್ನು ಪ್ರಧಾನಿ ಮೋದಿಯವರಿಗೆ ನೀಡಿ ಗೌರವಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಭೂತಾನ್ ದೊರೆ ಜಿಗ್ಮೆ ಖೆಸರ್ ನಮ್ಗೀಯೆಲ್ ವಾಂಗ್ಚುಕ್ ಪ್ರಧಾನಿ ಮೋದಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ’ ಪ್ರಶಸ್ತಿಯನ್ನು ಸಮಾಜಕ್ಕೆ ಅಭೂತಪೂರ್ವ ಕಾಣಿಕೆ ನೀಡಿದ್ದನ್ನು ಗೌರವಿಸಿ ಕೊಡಲಾಗುತ್ತದೆ ಮತ್ತು ಪ್ರಧಾನಿ ಮೋದಿ ಈ ಪ್ರಶಸ್ತಿಯಿಂದ ಸತ್ಕರಿಸಲ್ಪಟ್ಟ ಮೊದಲ ವಿದೇಶೀ ಗಣ್ಯವ್ಯಕ್ತಿಯಾಗಿದ್ದಾರೆ.
ಮುಂದಿನ ಕೆಲ ದಿನಗಳಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಎಕಾನಮಿಯಾಗಲಿದ್ದು ಅದರಲ್ಲಿ ಭೂತಾನ್ ದೇಶದ ಬಲಿಷ್ಠ ಸಹಭಾಗಿತ್ವ ಇರಲಿದೆ. ಬೇರೆ ದೇಶಗಳ ಪುರಸ್ಕಾರ ಸಿಕ್ಕಾಗ ಎರಡು ದೇಶಗಳು ಸರಿಯಾದ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿವೆ ಅನ್ನೋದನ್ನು ಸೂಚಿಸುತ್ತವೆ, ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಶಸ್ತಿಯಿಂದ ಸನ್ಮಾನಿತರಾದ ಮೇಲೆ ನೆರೆದ ಜನರನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ಮೋದಿ ಭಾರತ ಮತ್ತು ಭೂತಾನ್ ನಡುವಿನ ಸಂಬಂಧಗಳು ಎಷ್ಟು ಹಳೆಯವೋ ಅಷ್ಟೇ ನವೀನ ಮತ್ತು ಪ್ರಸ್ತುತವಾಗಿವೆ. ಎರಡೂ ದೇಶಗಳು ಭವ್ಯ ಪ್ರಾಚೀನ ಪರಂಪರೆಯ ಭಾಗವಾಗಿವೆ ಎಂದರು. ಭೂತಾನ್ ದೇಶದ ಸರ್ವೋಚ್ಛ ರಾಷ್ಟ್ರೀಯ ಪ್ರಶಸ್ತಿಯಿಂದ ಪುರಸ್ಕೃತವಾಗಿರುವ ದಿನ ನನ್ನ ಬದುಕಿನ ಅತ್ಯಂತ ಮಹತ್ವದ ದಿನವಾಗಿದೆ ಎಂದು ಅವರು ಹೇಳಿದರು.