ನವದೆಹಲಿ: ಭಾರತದ ಆರ್ಥಿಕ ಅಭಿವೃದ್ಧಿ ಬಗ್ಗೆ ದೊಡ್ಡ ಹೈಪ್ ಆಗಿದೆ. ಭಾರತವೇನಾದರೂ ಈ ಹೈಪ್ ನಂಬಿದರೆ ಅದು ದೊಡ್ಡ ತಪ್ಪಾಗುತ್ತದೆ ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಮನ್ ಎಚ್ಚರಿಸಿದ್ದಾರೆ. ಆರ್ಥಿಕ ಅಭಿವೃದ್ಧಿ ಬಗ್ಗೆ ಇರುವ ಅತಿರೇಕದ ಪ್ರಚಾರವನ್ನು ಭಾರತ ನಂಬಿದರೆ ದೊಡ್ಡ ತಪ್ಪಾಗುತ್ತದೆ. ಈ ಹೈಪ್ ವಾಸ್ತವದಲ್ಲಿ ನಿಜವಾಗುವುದನ್ನು ಖಚಿತಪಡಿಸಿಕೊಳ್ಳಬೇಕಾದರೆ ಭಾರತ ಇನ್ನೂ ಹಲವು ವರ್ಷ ಕಾಲ ಶ್ರಮ ಪಡಬೇಕಾಗುತ್ತದೆ ಎಂದೂ ರಾಜನ್ ತಿಳಿಸಿದರು.
‘ನೀವು ಈ ಹೈಪ್ ನಂಬಬೇಕೆಂದು ರಾಜಕಾರಣಿಗಳು ಬಯಸುತ್ತಾರೆ. ನಾವು ಈ ಆರ್ಥಿಕತೆಯ ಮಟ್ಟವನ್ನು ತಲುಪಿದ್ದೇವೆ ಎಂದು ನಾವು ನಂಬುವುದು ಅವರಿಗೆ ಬೇಕು. ಈ ನಂಬಿಕೆಗೆ ಶರಣಾಗುವುದು ಭಾರತ ಮಾಡುವ ಬಹಳ ದೊಡ್ಡ ತಪ್ಪು,’ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ. 2047ರಲ್ಲಿ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡಲು ಪ್ರಧಾನಿ ಗುರಿ ಇಟ್ಟಿರುವ ನಿರ್ಧಾರವನ್ನು ರಾಜನ್ ಕಟುವಾಗಿ ಟೀಕಿಸಿದರು.
ಚಿಪ್ ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ದೊಡ್ಡ ಯೋಜನೆಗಳತ್ತ ಸರ್ಕಾರ ತೀರಾ ಮಗ್ನವಾಗಿದೆ. ಆದರೆ, ಈ ಉದ್ಯಮಗಳಿಗೆ ಬೇಕಾದ ಎಂಜಿನಿಯರುಗಳನ್ನು ರೂಪಿಸುವಂತಹ ಶಿಕ್ಷಣ ವ್ಯವಸ್ಥೆ ಬಗ್ಗೆ ಗಮನವೇ ಹರಿಸುತ್ತಿಲ್ಲ. ಭಾರತ ಶ್ರೇಷ್ಣ ದೇಶವಾಗಬೇಕೆಂಬ ಸರ್ಕಾರದ ಹಂಬಲ ನೈಜವಾದುದು. ಆದರೆ, ಹಾಗೆ ಆಗಲು ಏನು ಮಾಡಬೇಕು ಎಂಬುದು ಅದರ ಗಮನದಲ್ಲಿ ಇಲ್ಲ ಎಂದು ರಾಜನ್ ವಿಷಾದಿಸಿದ್ದಾರೆ.
ನಿಮ್ಮ ಬಹಳಷ್ಟು ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣವೂ ಇಲ್ಲ. ಶಾಲೆ ತೊರೆಯುತ್ತಿರುವ ಸಂಖ್ಯೆ ಹೆಚ್ಚಿರುವಾಗ ಈ ರೀತಿ ಮಾತುಗಳನ್ನು ಆಡುವುದು ಅಸಂಬದ್ಧ ಎಂದಿದ್ದು, ಸರ್ಕಾರದ ನೀತಿ ಮತ್ತು ಆದ್ಯತೆಗಳನ್ನು ರಘುರಾಮ್ ರಾಜನ್ ಕಟುವಾಗಿ ವಿಮರ್ಶಿಸಿದ್ದಾರೆ. ಸರ್ಕಾರ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಗೆ ನೀಡಲು ಮುಂದಾಗಿರುವ ಸಬ್ಸಿಡಿ ಹಣವು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಇಟ್ಟಿರುವ ಬಜೆಟ್ಗಿಂತ ಹೆಚ್ಚು. ಇದು ತಪ್ಪಾದ ಆದ್ಯತೆ ಎಂದು ಮಾಜಿ ಆರ್ಬಿಐ ಗವರ್ನರ್ ಅಭಿಪ್ರಾಯಪಟ್ಟರು.