ತುಮಕೂರು: ಬರದಿಂದ ನಲುಗಿರುವ ಕೃಷಿ ಕ್ಷೇತ್ರಕ್ಕೆ ವಿದ್ಯುತ್ ಬರೆ ಎಳೆಯಲಾಗಿದೆ. ಸುಸೂತ್ರ ವಿದ್ಯುತ್ ಸೌಲಭ್ಯ ಇಲ್ಲದೆ ತೋಟಗಾರಿಕೆ, ತರಕಾರಿ ಬೆಳೆಗಳಿಗೆ ತೊಂದರೆಯಾಗುತ್ತಿದೆ. ರೈತರು ವಿದ್ಯುತ್ ‘ಗ್ಯಾರಂಟಿ’ಗಾಗಿ ಸರಕಾರವನ್ನು ಆಗ್ರಹಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ನೀರಾವರಿ ಪಂಪ್ಸೆಟ್ಗಳಿಗೆ ನಿತ್ಯ 7 ಗಂಟೆ ವಿದ್ಯುತ್ ನೀಡಿಕೆ ಕೇವಲ ಸರಕಾರದ ಆಶ್ವಾಸನೆಯಾಗಿ ಉಳಿದಿದೆ. ದಿನ ಬೆಳಗ್ಗೆ 3 ಗಂಟೆ ಹಾಗೂ ರಾತ್ರಿ 3 ಗಂಟೆಗಳ ಕಾಲ ವಿದ್ಯುತ್ ನೀಡಿದರೂ ವಿದ್ಯುತ್ ನೀಡಿಕೆ ಅವಧಿಯಲ್ಲಿ ಹಲವಾರು ಬಾರಿ ವಿದ್ಯುತ್ ಕಡಿತವಾಗುತ್ತಿದೆ.
6 ಗಂಟೆ ವಿದ್ಯುತ್ ನೀಡಿಕೆ ಕೂಡ ಲೆಕ್ಕಕ್ಕಷ್ಟೇ.ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ ವಿದ್ಯುತ್ ಕಡಿತ ಅಷ್ಟಾಗಿ ಮಾಡಿಲ್ಲ. ಕೃಷಿ ಪಂಪ್ಸೆಟ್ಗಳಿಗೆ ಮಾತ್ರ ಹೆಚ್ಚು ಸಮಸ್ಯೆ ಸೃಷ್ಟಿಯಾಗಿದೆ. ಗ್ರಾಮೀಣ ಭಾಗದಲ್ಲಿ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗದೆ ಗೃಹಬಳಕೆಗೂ ಸಮಸ್ಯೆ ಆಗುತ್ತಿದೆ.ಕೃಷಿ ಬೆಳೆ ನಷ್ಟ:
ಈಗಾಗಲೇ ಬರ ತೀವ್ರತೆಗೆ ರೈತರು ಕೃಷಿ ಬೆಳೆ ನಷ್ಟವನ್ನು ಅನುಭವಿಸಿದ್ದಾರೆ. ಮಳೆಯಿಲ್ಲದೆ, ನೀರಿಲ್ಲದೆ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಬೇಸಿಗೆ ಹಂಗಾಮು ಬಿತ್ತನೆ ಗುರಿ ತಲುಪಲು ಕೃಷಿ ಇಲಾಖೆ ಹರಸಾಹಸ ಪಡುತ್ತಿದೆ. ನೀರಿನ ಸಮಸ್ಯೆಯಿಂದ ರೈತರು ಬೇಸಿಗೆ ಹಂಗಾಮು ಕೃಷಿಯ ಆಸೆಯನ್ನೇ ಕೈ ಬಿಟ್ಟಿದ್ದಾರೆ.
ತೋಟಗಾರಿಕೆ, ತರಕಾರಿ:
ದೀರ್ಘಾವಧಿ ಬೆಳೆಗಳಿಗೂ ಬರದ ಪೆಟ್ಟು ತಗುಲಿದೆ. ತೆಂಗು, ಅಡಕೆ ಮೊದಲಾದ ತೋಟಗಾರಿಕಾ ಬೆಳೆಗಳಿಗೂ ಸಮಸ್ಯೆ ಎದುರಾಗುತ್ತಿದೆ. ಗರಿಗಳು ಒಣಗುತ್ತಿವೆ. ಮೊದಲೇ ರೋಗಬಾಧೆಯಿಂದ ತತ್ತರಿಸುವ ತೋಟಗಳು ಬಿಸಿಲಿನ ತಾಪವನ್ನು ತಡೆದುಕೊಳ್ಳಲಾಗದೆ ಸೊರಗುತ್ತಿವೆ.
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸಮಸ್ಯೆ:
ಗ್ರಾಮೀಣ ಭಾಗದಲ್ಲಿ, ಅದರಲ್ಲೂ ವಿಶೇಷವಾಗಿ ತೋಟದ ಮನೆಗಳು, ಕುಗ್ರಾಮಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಹೆಚ್ಚಿದ್ದು, ಇದರಿಂದ ರೈತರಿಗೆ ಮಾತ್ರವಲ್ಲದೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಓದಿಕೊಳ್ಳಲು ಸಮಸ್ಯೆಯಾಗುತ್ತಿದೆ.
ಬೆಳೆ ಪರಿಹಾರ ಕಡಿಮೆ:
ರಾಜ್ಯ ಸರಕಾರ ಹೆಕ್ಟೇರ್ಗೆ 2000 ರೂ. ಬೆಳೆ ನಷ್ಟ ಪರಿಹಾರವನ್ನು ನೀಡಿದೆ. ಅಂದರೆ ಗುಂಟೆಗೆ 20 ರೂಪಾಯಿ ಸಿಕ್ಕಂತಾಗುತ್ತದೆ. ರೈತರಿಗೆ ಪರಿಹಾರದ ಹಣದಲ್ಲಿ ಲಾಭ ಬದಿಗಿರಲಿ ಕನಿಷ್ಠ ಮಾಡಿದ ಖರ್ಚು ಕೂಡ ಸಿಗುತ್ತಿಲ್ಲ. ಈ ಬಗ್ಗೆ ಇಡೀ ರೈತಾಪಿ ವರ್ಗ ಅಸಮಾಧಾನ ಹೊಂದಿದೆ.