ಹೊಸದಿಲ್ಲಿ: ”ನನ್ನ ಬಳಿ ಹಣಬಲ ಇಲ್ಲ, ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಧ್ಯವಿಲ್ಲ,” ಎಂದು ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೊಂಡಿದ್ದಾರೆ.
‘ಟೈಮ್ಸ್ ನೌ’ ಶೃಂಗದಲ್ಲಿ ಮಾತನಾಡಿದ ಅವರು, , ”ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಅವರು ಆಂಧ್ರಪ್ರದೇಶ ಅಥವಾ ತಮಿಳುನಾಡಿನ ಯಾವುದಾದರೂ ಒಂದು ಕ್ಷೇತ್ರದಿದ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಕೇಳಿದ್ದರು. ಒಂದು ವಾರ ಯೋಚನೆ ಮಾಡಿದೆ. ದೊಡ್ಡ ಮಟ್ಟದ ಆರ್ಥಿಕ ಸಂಪನ್ಮೂಲಗಳು ಇಲ್ಲದಿರುವಾಗ ಚುನಾವಣೆಗೆ ಸ್ಫರ್ಧೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದೆ. ಪಕ್ಷದ ಅಧ್ಯಕ್ಷರಿಗೂ ಇದೇ ವಿಚಾರ ಮನವರಿಕೆ ಮಾಡಿಕೊಟ್ಟೆ,” ಎಂದು ತಿಳಿಸಿದರು.”
ತಮಿಳುನಾಡು ಅಥವಾ ಆಂಧ್ರಪ್ರದೇಶದಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವ ಮಾನದಂಡಗಳಲ್ಲಿ ಯಾವುದೂ ನನ್ನ ಪರವಾಗಿ ಇಲ್ಲ. ಜಾತಿ, ಧರ್ಮ, ಸಮುದಾಯ ಯಾವುದೂ ಇಲ್ಲದಿರುವಾಗ ಚುನಾವಣೆಯಿಂದ ದೂರ ಉಳಿಯುವುದೇ ಉತ್ತಮ,” ಎಂಬ ತೀರ್ಮಾನಕ್ಕೆ ಬಂದಿದ್ದಾಗಿ ಸೀತಾರಾಮನ್ ಹೇಳಿದರು.
ದೇಶದ ವಿತ್ತ ಮಂತ್ರಿ ಬಳಿಯೇ ಹಣ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ”ನನ್ನ ಸಂಬಳ, ನನ್ನ ದುಡಿಮೆ ಅಥವಾ ನನ್ನ ಉಳಿತಾಯ ಮಾತ್ರ ನನ್ನದು. ಸರಕಾರದ ಬಳಿಯಿರುವ ಧನ ನನ್ನದಲ್ಲ. ಅದು ಭಾರತೀಯ ಜನರಿಗೆ ಸೇರಿದ ತೆರಿಗೆ ಹಣ,” ಎಂದು ಸೂಚಿಸಿದರು.