ಸಾತನೂರು: ರಾಮನಗರ ಜಿಲ್ಲೆ ಸಾತನೂರು ಹೋಬಳಿಯ ಕೆಮ್ಮಾಳೆ, ದಾಳಿಂಬ, ಕಬ್ಬಾಳು ಹಾಗೂ ಸುತ್ತಮುತ್ತಲ ಹೆಚ್ಚಿನ ಗ್ರಾಮಗಳಲ್ಲಿ ರೈತರು ಹೆಚ್ಚಾಗಿ ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ.
ರೇಷ್ಮೆ ಹುಳು ಹಾಗೂ ಬೆಳೆಯಿಂದ ರೈತರು ಸಂಕಷ್ಟ ಸ್ಥಿತಿಗೆ ಸಿಲುಕಿದ್ದು, ಬೇಸಿಗೆ ಕಾಲದಲ್ಲಿ ಬೆಳೆಗಳ ಸಂರಕ್ಷಣೆ ಮಾಡಲು ಹಲವಾರು ಕ್ರಮಗಳನ್ನು ಅನುಸರಿಸಬೇಕು ಎಂದು ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಸಣ್ಣ ರೇಷ್ಮೆ ಬೆಳೆಗಾರರು ಹಾಗೂ ಸಾಮಾನ್ಯ ಬೆಳೆಗಾರರು ಪ್ರತ್ಯೇಕ ರೇಷ್ಮೆ ಹುಳು ಸಾಕಾಣಿಕೆ ಮನೆ ಹೊಂದಿಲ್ಲ. ತಾವು ವಾಸ ಮಾಡುವ ಮನೆಗಳು ಹಾಗೂ ಸಿಮೆಂಟ್ ಶೀಟ್ ಮೇಲ್ಛಾವಣಿಗಳಲ್ಲಿ ರೇಷ್ಮೆ ಹುಳುಗಳನ್ನು ಸಾಕಾಣಿಕೆ ಮಾಡುವುದರಿಂದ ರೇಷ್ಮೆ ಹುಳುಗಳು ಬಿಸಿಲಿನ ತಾಪದಿಂದ ರೋಗಗಳಿಗೆ ತುತ್ತಾಗಿ ರೇಷ್ಮೆ ಬೆಳೆ ಸರಿಯಾಗಿ ಆಗುತ್ತಿಲ್ಲ.
80ರಿಂದ 100 ಕೆಜಿ ರೇಷ್ಮೆಗೂಡು ಬೆಳೆಯುತ್ತಿದ್ದ ರೈತರು, ಇದೀಗ 30ರಿಂದ 40 ಕೆಜಿ ಬೆಳೆಯಲು ಸಾಧ್ಯವಾಗುತ್ತಿಲ್ಲ, ರೇಷ್ಮೆ ಬೆಳೆಯಲು ಹೆಚ್ಚಿನ ಖರ್ಚು ಮಾಡಬೇಕೆದ್ದು, ರೇಷ್ಮೆಹುಳು ಮರಿಗಳ ಬೆಲೆಯೂ ಅಧಿಕವಾಗಿದ್ದು, ಸುಣ್ಣ, ಪೇಪರು, ಚಂದ್ರಿಕೆ ಬಾಡಿಗೆ, ಕಾರ್ಮಿಕರ ಕೂಲಿ, ಸಾಕಾಣಿಕೆ ವೆಚ್ಚ, ರೇಷ್ಮೆ ತೋಟದಿಂದ ರೇಷ್ಮೆ ಸೊಪ್ಪನ್ನು ಸಾಗಾಣಿಕೆ ಮಾಡಲು ಹೆಚ್ಚಿನ ವೆಚ್ಚ ಮಾಡಬೇಕಾಗುತ್ತಿದೆ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದರೂ ರೇಷ್ಮೆ ಬೆಳೆ ಬಿಸಿಲಿನ ಝಳದಿಂದ ಹಲವಾರು ರೋಗಗಳಿಗೆ ತುತ್ತಾಗುತ್ತಿದೆ.
ರೇಷ್ಮೆ ಇಲಾಖೆಯು ಸಣ್ಣ ರೇಷ್ಮೆ ಬೆಳೆಗಾರರನ್ನು ಗುರುತಿಸಿ, ಬೇಸಿಗೆ ಕಾಲದಲ್ಲಿ ರೇಷ್ಮೆ ಹುಳುಗಳನ್ನು ಸಾಕಾಣಿಕೆ ಮಾಡಲು ಅಗತ್ಯವಾದ ಉಪಕರಣಗಳು ಹಾಗೂ ಸವಲತ್ತುಗಳನ್ನು ನೀಡಬೇಕು. ಜತೆಗೆ, ತರಬೇತಿ ನೀಡಬೇಕು. ಬೇಸಿಗೆ ಕಾಲದಲ್ಲಿ ರೇಷ್ಮೆ ಹುಳುಗಳು ತುತ್ತಾಗುವ ರೋಗಗಳ ಬಗ್ಗೆ ಮಾಹಿತಿ ನೀಡಬೇಕೆಂದು ರೇಷ್ಮೆ ಬೆಳೆಗಾರರು ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.
ರೇಷ್ಮೆ ಬೆಳೆ ರೈತರ ಪಾಲಿನ ಆರ್ಥಿಕ ಬೆಳೆಯಾಗಿದ್ದು, ರೇಷ್ಮೆ ಹುಳು ಸಾಕಾಣಿಕೆ ರೈತರಿಗೆ ಪ್ರಮುಖ ಆದಾಯ ಮೂಲವಾಗಿದೆ. ಆದರೆ ಕಳೆದ ವರ್ಷ ಬರಗಾಲ ಹಾಗೂ ಕಳೆದ 3 ತಿಂಗಳಿಂದ ಸತತ ಬೇಸಿಗೆಯ ಬಿಸಿಲು ಹೆಚ್ಚಾಗಿ ತೇವಾಂಶ ಕಡಿಮೆಯಾದ ಕಾರಣ ರೇಷ್ಮೆ ಹುಳುಗಳ ಆರೋಗ್ಯದಲ್ಲಿ ಏರುಪೇರಾಗಿ, ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗುತ್ತಿವೆ.
ಇದರಿಂದ ರೈತರು ಈ ಬೇಸಿಗೆಯ ಬಿಸಿಲ ಝಳದಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರು ಕಡಿಮೆಯಾದರೂ, ಹಗಲು ರಾತ್ರಿ ಎನ್ನದೆ ರೇಷ್ಮೆ ತೋಟಕ್ಕೆ ನೀರು ಕಟ್ಟಿದರು. ರೇಷ್ಮೆ ಹುಳುಗಳು ಬಿಸಿಲ ಬೇಗೆಯಿಂದ ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗಿ, ರೇಷ್ಮೆ ಬೆಳೆಗಾರನಿಗೆ ನಷ್ಟ ಉಂಟಾಗುತ್ತಿದ್ದು, ರೇಷ್ಮೆ ಬೆಳೆಗಾರರು ಬಿಸಿಲಿನ ತಾಪಮಾನದಿಂದ ಕಂಗಾಲಾಗಿದ್ದಾರೆ. ರೇಷ್ಮೆಗೂಡಿನ ಬೆಲೆ ಹೆಚ್ಚಳವಾಗಿದೆ, ಆದರೆ ಬಿಸಿಲಿನ ತಾಪಮಾನದಿಂದ ಬೆಳೆಗಳೇ ಆಗುತ್ತಿಲ್ಲ ಎಂದು ಮಾಹಿತಿ ಕಂಡು ಬಂದಿದೆ.