ನಿಮ್ಮ ಸುದ್ದಿ ಬಾಗಲಕೋಟೆ
ಕೊರೊನಾ ಮೂರನೆಯ ಅಲೆ ಆತಂಕದ ನಡುವೆಯೂ ಜಿಲ್ಲೆಯಲ್ಲಿ ನಡೆದ ಜಾತ್ರೆಯೊಂದರಲ್ಲಿ ಸಾವಿರಾರು ಜನ ಸೇರುವ ಮೂಲಕ ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಾರಿಗೊಳಿಸಿ ಜಿಲ್ಲಾಡಳಿತ ಜಾತ್ರೆ ನಿಷೇಧಿಸಿದ್ದರೂ ಸರಕಾರ ಮಾರ್ಗಸೂಚಿಗಳನ್ನು ಅದನ್ನು ಲೆಕ್ಕಸದೇ ಹುನಗುಂದ ತಾಲೂಕಿನ ಕಮತಗಿಯ ಗಿರಿಮಠದ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ರಥ ಎಳೆದಿದ್ದಾರೆ.
ಕೊರೊನಾ ನಿಯಮ ಗಾಳಿಗೆ ತೂರಿದ ಜನ ಪೊಲೀಸರಿಂದ ಅಂಗಡಿ ತೆರವಿನ ಸೂಚನೆಗೂ ಬಗ್ಗದೆ ಅದ್ದೂರಿ ಜಾತ್ರೆಯಲ್ಲಿ ಭಾಗವಹಿಸಿದ್ದರು.
ಕಮತಗಿಯ ಗಿರಿಮಠದ ಜಾತ್ರೆಯಲ್ಲಿ ಸರಕಾರದ ಆದೇಶಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜನ ಮೈಮರೆತು ಪಾಲ್ಗೊಂಡರು. ಜಾತ್ರೆಯಲ್ಲಿ ಅಂಗಡಿಗಳ ಸ್ಥಾಪನೆಗೆ ನಿಷೇಧವಿದ್ದರೂ ವ್ಯಾಪಾರಿಗಳು ಬಿಡಾರಗಳನ್ನು ಹಾಕಿ ವ್ಯಾಪಾರಕ್ಕೆ ಮುಂದಾದರು.
ಈ ಮಧ್ಯೆ ದಿನಸಿ ಹಾಗೂ ಸ್ಟೇಷನರಿ ಸಾಮಾನುಗಳ ಅಂಗಡಿ ಮಾಲೀಕರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು ನಮಗೆ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಜಾತ್ರೆ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ. ಕೊರೊನಾ ನಿಯಮಗಳನ್ನು ಎಲ್ಲರೂ ಪಾಲಿಸಲೇಬೇಕು ಎಂದು ಪೊಲೀಸರು ಅಂಗಡಿಗಳನ್ನು ತೆರವುಗೊಳಿಸಲು ಮುಂದಾದರು.
ಅಮೀನಗಡ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ ಅಂಗಡಿಗಳನ್ನು ತೆರವುಗೊಳಿಸಿದರಾದರು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಪೊಲೀಸರು ಹರಸಾಹಸ ಪಡಬೇಕಾಯಿತು.
ಹೇಳಿಕೊಳ್ಳುತ್ತೇವೆ!
ಇತ್ತೀಚೆಗೆ ಹೊಸದೊಂದು ಟ್ರೆಂಡ್ ಆರಂಭವಾಗಿದ್ದು ಆದೇ ಹೇಳಿಕೊಳ್ಳುತ್ತೇವೆ ಎಂಬ ಮಾತು ಕೇಳಿ ಬರುತ್ತಿದೆ. ಜಾತ್ರೆ, ವಿವಾಹ, ಸಭೆ ಸಮಾರಂಭ ಹೀಗೆ ಕೋವಿಡ್ ನಿಯಮ ಮೀರಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಯಾರೂ ಕೇರ್ ಮಾಡುತ್ತಿಲ್ಲ. ಕೇಳಿದರೆ ನಾವೆಲ್ಲ ಸರಳವಾಗಿ ಆಚರಿಸುತ್ತೇವೆ ಎನ್ನುವುದಲ್ಲದೆ ನಂತರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸುವುದು.
ಯಾರಾದರೂ ಕೇಳಿದರೆ ನಿಮಗೇಕೆ ಚಿಂತೆ ನಾವೆಲ್ಲ ಹೇಳಿಕೊಂಡಿದ್ದೇವೆ ಎಂಬ ಮಾತು ಕೇಳುತ್ತಿದ್ದು, ಕೊರೊನಾ ಮಾತ್ರ ಯಾರು ಹೇಳಿದರೂ ಕೇಳುವುದಿಲ್ಲ ಎಂಬ ಅರಿವಿಲ್ಲದೆ ಜಾತ್ರೆ ಸೇರಿದಂತೆ ಇತರೆ ಕಾರ್ಯಕ್ರಮ ಆಯೋಜಿಸುತ್ತಿರುವುದು ಕಾಣುತ್ತಿದ್ದು ಇದು ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸುತ್ತಿದೆ.